ಪವಾಡಗಳ ದೇವತೆ ದಂಡಿನ ದುರ್ಗಮ್ಮ ದೇವಿ ಕಾರ್ತಿಕೋತ್ಸವ
ಹರಪನಹಳ್ಳಿ: ಜ – 7 , ತಾಲೂಕಿನ ಅರಸೀಕೆರಿ ಗ್ರಾಮದ ಶಕ್ತಿ ದೇವತೆಯಾದ ದಂಡಿನ ದುರ್ಗಮ್ಮ ದೇವಿಯ ಕಳೆದ ಮೂರು ದಿನಗಳಿಂದ ಕಾರ್ತಿಕೋತ್ಸವ ಹಾಗೂ ಜಾತ್ರಾ ಮಹೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು .
ಜಾತ್ರೆಯ ಕೊನೆಯ ದಿನವಾದ ಭಾನುವಾರ ಬೆಳಗಿನ ಜಾವದಲ್ಲಿ ದೇವಿಯು ಹೊಳೆ ಪೂಜೆಗೆ ಹೋಗಿ ಬರುವ ದೃಶ್ಯವಂತರು ಮನೋಹರವಾದದ್ದು ಅಲ್ಲಿಯ ಪೂಜಾರಿಯ ಮೈ ಮೇಲೆ ಕೇಲುಒತ್ತು ಸಾಗುವಾಗ ಜನರೆಲ್ಲರೂ ಸಾಲಾಗಿ ಅಡ್ಡಗಟ್ಟಿ ಬೋರಲಾಗಿ ಮಲಗಿ ಕೊಂಡಿರುತ್ತಾರೆ ಹೀಗೆ ಮಲಗಿರುವ ಭಕ್ತ ಸಮೂಹದ ಮೇಲೆ ಕೇಲುಗಳನ್ನು ಹೊತ್ತುಕೊಂಡ ಪೂಜಾರಿಯು ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ಭಕ್ತ ಸಮೂಹದ ಮೇಲೆ ನಡೆದುಕೊಂಡು ಹೋಗಿ ಗುಡಿದುಂಬಿ ದೇವಿಯ ಕೇಲುಗಳನ್ನು ದೇವಾಲಯದಲ್ಲಿ ಯಥಾಪ್ರಕಾರ ಪ್ರತಿಷ್ಠಾಪಿಸುವರು .
ಈ ವೇಳೆ ಭಕ್ತರು ದಂಡಿನ ದುರ್ಗಮ್ಮ ನಿನ್ನಾಲಕ್ಕು ಉದೋ ಉದೋ ಎಂದು ಭಕ್ತಿಯ ಸಂಕೇತವಾಗಿ ಜಯ ಘೋಷಗಳನ್ನು ಕೂಗುತ್ತಾ ದನಕರುಗಳಿಗೆ ಜನಜಾನುವಾರುಗಳಿಗೆ ಕಾಲುಬಾಯಿ ರೋಗ ಮತ್ತು ಮಕ್ಕಳಿಗೆ ಅಮ್ಮ ಬಾರದಿರಲಿ ಎಂದು ಹರಕೆಯನ್ನು ಹೊತ್ತು ಬೋರಲಾಗಿ ಮಲಗಿದ್ದ ಭಕ್ತರು ಭಕ್ತಿಯನ್ನು ಸಮರ್ಪಿಸುತ್ತಾರೆ .
ದನ ಕರುಗಳಿಗೆ ಕಾಲುಬಾಯಿ ರೋಗಬಾರದಂತೆ ಹಾಗೂ ಕೋಳಿ ಕುರಿಗಳಿಗೆ ರೋಗಗಳು ಬಾರದಂತೆ ಹರಕೆಯನ್ನು ಮೀಸಲು ಕಟ್ಟಿಕೊಂಡಿರುತ್ತಾರೆ ಈ ರೀತಿ ಮೀಸಲು ಕಟ್ಟಿಕೊಂಡಿದ್ದಂತ ಭಕ್ತರು ಹಾರು ಗೋಳಿ , ( ಕೋಳಿಯನ್ನು ತೂರಿ ಬಿಡುವ ಪದ್ದತಿ ) ಕುರಿಮರಿಗಳು, ಸಣ್ಣ ಹಸುವಿನ ಕರುಗಳನ್ನು ತಂದು ದೇವಿಯ ಹೆಸರಿನಲ್ಲಿ ದೇವಾಲಯದ ಮುಂದೆ ಬಿಟ್ಟು ಹೋಗುತ್ತಾರೆ .
ಈ ರೀತಿ ಅನಾದಿಕಾಲದಿಂದಲೂ ಈ ಪದ್ಧತಿಗಳು ರೂಢಿಯಲ್ಲಿದ್ದು ಈಗಲೂ ಸಹ ಈ ಪದ್ಧತಿಗಳನ್ನು ಭಕ್ತರು ಅನುಸರಿಸಿಕೊಂಡು ಹೋಗುತ್ತಿದ್ದಾರೆ ಇದಕ್ಕೆಲ್ಲ ಮೂಲ ಹಿಂದೆ ದಂಡಿನ ದುರ್ಗಮ್ಮ ದೇವಿಯು ಈ ಭಾಗದಲ್ಲಿ ಅನೇಕ ಪವಾಡಗಳನ್ನು ನಡೆಸಿ ರೈತರ ಹಸು, ಕುರಿ ,ಮೇಕೆಗಳನ್ನು ರೋಗ ರುಜುನೆಗಳಿಂದ ರಕ್ಷಿಸಿದ್ದರು ಎಂಬ ಪ್ರತೀತಿ ಇದೆ ಹಾಗೂ ಪೂಜಾರಿ ಮೈಯಲ್ಲಿ ದೇವಿಯು ಬಂದು ಅನೇಕ ಪವಾಡಗಳನ್ನು ನಡೆಸಿದ್ದಳು ಎಂಬ ನಂಬಿಕೆಯೂ ಸಹ ಇದೆ ಹಾಗಾಗಿ ಈ ಭಾಗದ ರೈತಾಪಿ ಹಾಗೂ ಕೂಲಿ ಕಾರ್ಮಿಕವರ್ಗದ ಜನರು ದಂಡಿನ ದುರ್ಗಮ್ಮ ಎಂದರೆ ಎಲ್ಲಿಲ್ಲದ ಭಕ್ತಿ ತೋರುವುದರಲ್ಲಿ ಇಂದಿಗೂ ಸಹ ಪ್ರಸ್ತುತ .
ಈ ಸಂದರ್ಭದಲ್ಲಿ ರಾಜಕೀಯ ಮುಖಂಡರು ವಿವಿಧ ಭಾಗದಿಂದ ಆಗಮಿಸಿದ್ದ ಭಕ್ತ ಸಮೂಹದವರು, ರೈತರು, ಕೂಲಿ ಕಾರ್ಮಿಕರು ಸೇರಿದಂತೆ ಮುಂತಾದವರು ಹಾಜರಿದ್ದರು .