October 22, 2024

Vijayanagara Express

Kannada News Portal

ರಾಜಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಹೈ ಜಾಕ್ ಮಾಡಲಾಗಿದೆ – ಸಚಿವ ಆನಂದ್ ಸಿಂಗ್

1 min read

ವಿಪ ಚುನಾವಣೆ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ | ರಾಜಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಹೈಜಾಕ್ ಮಾಡಲಾಗಿದೆ: ಆನಂದಸಿಂಗ್ ವಾಗ್ದಾಳಿ
ಹರಪನಹಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವವೇ ಇಲ್ಲ. ಆ ಹುಡುಗ ರಾಹುಲ್ ಇಟಲಿಗೆ ಹೋಗಿ ಬರುತ್ತಾನೆ, ಸೋನಿಯಾ, ರಾಹುಲ್ ಅವರನ್ನು ಮೋದಿಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹೇಳಿದರು.
ತಾಲೂಕಿನ ಕಮ್ಮತ್ತಹಳ್ಳಿ ಗ್ರಾಮದಲ್ಲಿ ಭಾನುವಾರ ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆ ನಡೆಯುವ ವಿಧಾನ ಪರಿಷತ್   ಚುನಾವಣೆಯ ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ್ ಅವರ ಪರವಾಗಿ ಮತಯಾಚನೆಯ ಬಹಿರಂಗ ಸಭೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಸಿಗುವ ಮೊದಲು ಕಾಂಗ್ರೆಸ್ ಅಂತ ಹೆಸರು ಇಟ್ಟುಕೊಂಡು ಸ್ವಾತಂತ್ರ್ಯ ಸಿಕ್ಕ ನಂತರ ಮಹಾತ್ಮ ಗಾಂಧೀಜಿ ಅವರು ಪಕ್ಷವನ್ನು ವಿಸರ್ಜನೆ ಮಾಡಲು ಪ್ರಯತ್ನಿಸಿದರು. ಆದರೆ ರಾಜಕೀಯ ಉದ್ದೇಶಕ್ಕೆ ಹೈಜಾಕ್ ಮಾಡಿಕೊಂಡು ಇಲ್ಲಿವರೆಗೆ ನಡೆಸಿಕೊಂಡು ಬರುತ್ತಿದ್ದಾರೆ. ಏಕೆಂದರೆ ಕಾಂಗ್ರೆಸ್‌ನವರಿಗೆ ಯಾವುದೇ ಅಸ್ಥಿತ್ವ ಇಲ್ಲ. ಜವಾರಲಾಲ್ ನೆಹರು ನಂತರ ರಾಜಕೀಯ ಶುರುವಾಗಿದ್ದು, ಒಂದೇ ಮನೆತನದವರು ಆಡಳಿತ ಮಾಡುವ ದುರುದ್ದೇಶ ಹೊಂದಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ದೇಶದ ಸಂಸ್ಕೃತಿಯೇ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಜಗಳೂರು ಕ್ಷೇತ್ರದ ಶಾಸಕ ಎಸ್.ವಿ.ರಾಮಚಂದ್ರಪ್ಪ ಮಾತನಾಡಿ, ‘ವಿಜಯನಗರವನ್ನು ಹಿಂದೆ ಅಕ್ಕ-ಬುಕ್ಕರು ಸ್ಥಾಪನೆ ಮಾಡಿದರು. ಇದೀಗ ವಿಜಯನಗರವನ್ನು ಅನಂದಸಿಂಗ್-ಯಡಿಯೂರಪ್ಪ ಮಾಡಿದ್ದಾರೆ. ವಿಜಯನಗರ ಜಿಲ್ಲೆಯನ್ನಾಗಿ ಅನಂದಸಿಂಗ್ ಮಾಡಿರುವುದರಿಂದ ಅವರನ್ನು ಯಾರು ಮರೆಯುವಂತಿಲ್ಲ. ಇಂತಹ ನಾಯಕನ ಉಸ್ತುವಾರಿಯಲ್ಲಿ ಚುನಾವಣೆ ನಡೆಯುತ್ತಿದೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದ ನಂತರ ಸಾರೋಟದಲ್ಲಿ ಅನಂದಸಿಂಗ್ ಅವರನ್ನು ಮೆರವಣಿಗೆ ಮಾಡಿಸುತ್ತೇನೆ’ ಎಂದು ತಿಳಿಸಿದರು.

‘ಸ್ವಾಭಿಮಾನ ಅಂತ ಇದ್ದರೆ ಅನಂದಸಿಂಗ್ ನೋಡಿ ಸತೀಶ್ ಅವರಿಗೆ ಓಟು ಹಾಕಿ. ಜಿಲ್ಲೆ ಮಾಡಿದ ಪುಣ್ಯಾತ್ಮ ಆತ. ವಿಜಯನಗರ ಚರಿತ್ರೆ ಮರುಕಳಿಸುವಂತೆ ಮಾಡಿದ ಪುಣ್ಯಾತ್ಮ ಅವರು. ಪ್ರವಾಸೋದ್ಯಮ ಸಚಿವರಾಗಿದ್ದಾಗ ಕ್ಷೇತ್ರದ ಉಚ್ಚಂಗಿದುರ್ಗದಲ್ಲಿ ಯುವ ಜನ ಮೇಳ ಮಾಡಿದ್ವಿ, ಆ ಪುಣ್ಯಾತ್ಮ ಕೊಟ್ಟ ದುಡ್ಡು ಇವಾಗ ಬಂದಿದೆ. ಅವರಿಂದಲೇ ಉಚ್ಚಂಗಿದುರ್ಗದಲ್ಲಿ ಶಂಕುಸ್ಥಾಪನೆ ಮಾಡಿಸುತ್ತೇನೆ, ದೊಡ್ಡ ಸನ್ಮಾನ ಮಾಡಿ ಋಣ ತೀರಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಏಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಭರಪೂರ ಕೆಲಸ ನಡೆಯುತ್ತಿವೆ. ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ನೀರು ಹರಿಯುವ ಕೆಲಸ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದ ಅವರು, ವಿಧಾನ ಪರಿಷತ್ ಚುನಾವಣೆಯನ್ನು ಸವಾಲಾಗಿ ಪರಿಗಣಿಸಿ ಗೆಲ್ಲಿಸಲು ಶ್ರಮಿಸುತ್ತೇವೆ. ಬಿಜೆಪಿ ವಿಜೃಂಭಿಸಬೇಕು. ನಾನು ತಲೆ ಎತ್ತಿಕೊಂಡು ನಡೆಯುವಂತೆ ಮಾಡಬೇಕು ಎಂದು ಸದಸ್ಯರಲ್ಲಿ ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ, ಮುಖಂಡರಾದ ಜಿ.ನಂಜನಗೌಡ, ಆರುಂಡಿ ನಾಗರಾಜ್, ಪಿ.ಮಹಾಬಲೇಶ್ವರಗೌಡ ಅವರು ಮಾತನಾಡಿ, ಬಿಜೆಪಿ ಅಭ್ಯರ್ಥಿಗೆ ಮತ ನೀಡುವ ಮೂಲಕ ಗೆಲ್ಲಿಸುವಂತೆ ಗ್ರಾಮ ಪಂಚಾಯ್ತಿ ಸದಸ್ಯರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ವೈ.ಡಿ.ಅಣ್ಣಪ್ಪ, ಅನಿಲ್ ಯಾದವ್, ಮುರಾರಿಗೌಡ, ಡಿ.ಸಿದ್ದಪ್ಪ, ಚಟ್ನಿಹಳ್ಳಿ ರಾಜಪ್ಪ, ಬಾಗಳಿ ಕೊಟ್ರೇಶಪ್ಪ, ಪೂಜಾರ್ ಚಂದ್ರಶೇಖರ, ಓಂಕಾರಗೌಡ, ಬೇವಿನಹಳ್ಳಿ ಕೆಂಚನಗೌಡ, ಎಸ್.ಪಿ.ಲಿಂಬ್ಯಾನಾಯ್ಕ, ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಹನುಮಂತಪ್ಪ, ತೌಡೂರು ಮಂಜನಾಥಯ್ಯ, ಚಂದ್ರನಾಯ್ಕ ಮತ್ತಿತರರು ಉಪಸ್ಥಿತಿದ್ದರು.

Leave a Reply

Your email address will not be published. Required fields are marked *