Vijayanagara Express

Kannada News Portal

ಗಾಂಧೀಜಿ ಹಾಕಿ ಕೊಟ್ಟ ಅಹಿಂಸಾ ಮಾರ್ಗ ಯುವಕರಿಗೆ ಸ್ಫೂರ್ತಿ| ಎಂ.ಪಿ.ರವಿಂದ್ರ ಪ್ರತಿಷ್ಟಾನವತಿಯಿಂದ ಪ್ರತಿಭಾ ಪುರಸ್ಕಾರ 

1 min read

ಹರಪನಹಳ್ಳಿ: ಮಹಾತ್ಮಾ ಗಾಂಧೀಜಿಯವರು ಹಾಕಿ ಕೊಟ್ಟ ಅಹಿಂಸಾ ಮಾರ್ಗ ಹಾಗೂ ಅವರ ಜೀವನ ಶೈಲಿಯು ಇಂದಿನ ಯುವಕರಿಗೆ ಸ್ಫೂರ್ತಿದಾಯಕವಾಗಿದೆ. ಗಾಂಧೀಜಿಯವರ ಅಹಿಂಸಾ ತತ್ವಗಳನ್ನು ಪಾಲಿಸೋಣ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.
ಕಾಂಗ್ರೆಸ್ ಕಚೇರಿಯ ಗಾಂಧಿ ಜಯಂತಿಯಲ್ಲಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮತ್ತು ಮುಖಂಡರು
ಕಾಂಗ್ರೆಸ್ ಕಚೇರಿಯ ಗಾಂಧಿ ಜಯಂತಿಯಲ್ಲಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮತ್ತು ಮುಖಂಡರು
ಪಟ್ಟಣದ ಸರ್ಕಾರಿ ಜ್ಯೂನಿಯರ್ ಕಾಲೇಜ್‌ನ ಗಾಂಧೀಜಿ ಮೆಮೋರಿಯಲ್ ಹಾಲ್ ಬಳಿ ಮಹಾತ್ಮ ಗಾಂಧೀಜಿ ಅವರ ಅಮೃತ ಮಹೋತ್ಸವ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಎಂ.ಪಿ.ರವಿಂದ್ರ ಪ್ರತಿಷ್ಟಾನವತಿಯಿಂದ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ನನ್ನ ಜೀವನವೇ ನನ್ನ ಸಂದೇಶ ಎಂದು ಜಗತ್ತಿಗೆ ಸಾರಿದ ಗಾಂಧೀಜಿಯವರು ತಮ್ಮ ಸರಳ ಜೀವನ ಹಾಗೂ ಆದರ್ಶಗಳ ಮೂಲಕ ಗುರುತಿಸಲ್ಪಡುತ್ತಾರೆ. ಅಹಿಂಸಾತ್ಮಕ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಅವರು ಇತರೆ ದೇಶಗಳ ಸ್ವಾತಂತ್ರ್ಯ ಹೋರಾಟಕ್ಕೂ ಸ್ಫೂರ್ತಿಯಾಗಿದ್ದರು. ಅದೇ ರೀತಿ ಸರಳ ಮತ್ತು ಸೌಜನ್ಯಯುತ ನಡವಳಿಕೆಯನ್ನು ಹೊಂದಿದ್ದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ಕೂಡ ದೇಶದ ಪ್ರಗತಿಗೆ ಶ್ರಮಿಸಿದರು ಎಂದು ಅವರು ಸ್ಮರಿಸಿದರು.
ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಬದುಕು ನಮಗೆಲ್ಲ ದಾರಿದೀಪವಾಗಿದೆ. ಗಾಂಧೀಜಿಯವರ ತತ್ವಾದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ವಿದೇಶಿಗರು ನಮ್ಮನ್ನು ಗಾಂಧೀ ನಾಡಿನವರು ಎಂದು ಗುರುತಿಸುವುದು ನಮಗೆಲ ಹೆಮ್ಮೆಯ ವಿಷಯವಾಗಿದೆ. ಅಹಿಂಸಾ ಚಳುವಳಿಯಿಂದ ಗಾಂಧೀಜಿ ಅವರು ಮಹಾತ್ಮ ಎಂದು ಕರೆಸಿಕೊಂಡರು. ಅವರ ಅಹಿಂಸಾ ತತ್ವದಿಂದ ಪ್ರಭಾವಿತಗೊಂಡ ವಿಶ್ವ ಸಂಸ್ಥೆಯು ಅಕ್ಟೋಬರ್ ೨ ಅನ್ನು ವಿಶ್ವ ಅಹಿಂಸಾ ದಿನ ಎಂದು ಘೋಷಣೆ ಮಾಡಿತು. ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಅವರು ಮಹಿಳೆಯರಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿ ಕೊಟ್ಟರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಅನಲೈನ್ ಕೋಚಿಂಗ್ ತರಬೇತಿಯ ಪಾಸ್‌ವರ್ಡ್ ವಿತರಿಸಲಾಯಿತು. ನಂತರ ಗಾಂಧೀಜಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಮಹಾತ್ಮ ಗಾಂಧೀಜಿಯವರ ೧೫೨ನೇ ಜಯಂತಿ ಅಂಗವಾಗಿ ಕಾಂಗ್ರೆಸ್ ಪಕ್ಷದವತಿಯಿಂದ ಹಮ್ಮಿಕೊಂಡಿದ್ದ ಸಾಮರಸ್ಯ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *