September 18, 2024

Vijayanagara Express

Kannada News Portal

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರ ಜಾತಿ ಗಣತಿ ಸ್ವಯಂಪ್ರೇರಿತವಾಗಿ ಸಮೀಕ್ಷೆ ನೆಡೆಸಿದ್ದೇನೆ – ಎಂ.ಬಿ.ಯಶವಂತಗೌಡ

1 min read

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರ ಜಾತಿ ಗಣತಿ ಸ್ವಯಂಪ್ರೇರಿತವಾಗಿ ಸಮೀಕ್ಷೆ ನೆಡೆಸಿದ್ದೇನೆ – ಎಂ.ಬಿ.ಯಶವಂತಗೌಡ

ಹರಪನಹಳ್ಳಿ: ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ವೈಯಕ್ತಿಕವಾಗಿ ಮತದಾರರ ಜಾತಿ
ಗಣತಿ ಮಾಡಿಸಿದ್ದು, ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ದತೆ ನಡೆಸಿದ್ದೇನೆ ಎಂದು
ತಾಲ್ಲೂಕು ವೀರಶೈವ ಮಹಾಸಭಾದ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡ ಎಂ.ಬಿ.ಯಶವಂತಗೌಡ
ತಿಳಿಸಿದರು.
ಹರಪನಹಳ್ಳಿ ಪಟ್ಟಣದ ತಮ್ಮ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ
ಅವರು, ಪ್ರತಿಯೊಂದು ಸಮುದಾಯವೂ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಜಾತಿಯ ಮತದಾರರು ಕ್ಷೇತ್ರದಲ್ಲಿ ಇರುವುದಾಗಿ
ಹೇಳಿಕೊಳ್ಳುತ್ತಿದ್ದರು. ಆದರೆ ನಿಜವಾಗಿ ಎಷ್ಟು ಮತದಾರರು ಯಾವ ಯಾವ ಜಾತಿಯಲ್ಲಿ
ಇದ್ದಾರೆ ಎನ್ನುವ ಕುತೂಹಲ ಪ್ರತಿಯೊಬ್ಬರನ್ನು ಕಾಡುತ್ತಿತ್ತು,ಹೀಗಾಗಿ ವೈಯಕ್ತಿಕವಾಗಿ ನಾನು
ಸಮೀಕ್ಷೆ ನಡೆಸಿ ಚುನಾವಣೆಗೆ ತಯಾರಿ ನಡೆಸಿದ್ದೇನೆ ಎಂದರು.
ಯಾವ ಜಾತಿಯಲ್ಲಿ ಎಷ್ಟು ಮತಗಳಿವೆ?
ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆ ಲಿಂಗಾಯಿತರು-48,328ಮತದಾರರು,
ವಾಲ್ಮೀಕಿ ನಾಯಕ-27,443, ಮುಸ್ಲಿಂ-19,862, ಕುರುಬರು-18,572, ಲಂಬಾಣಿ-17,023,
ಮಾದಿಗರು-15,456, ಬಾರಿಕರು-5317,ಉಪ್ಪಾರರು-4748, ಜಂಗಮರು-3787, ಭೋವಿ-4660,
ಗೊಲ್ಲರು-2832, ಮಡಿವಾಳರು-2507, ವಿಶ್ವಕರ್ಮ-2184, ಕೊರಚರು-2081, ಛಲವಾದಿ-1586,
ಶ್ಯಾನಭೋಗರು-1016, ಈಡಿಗರು-1086, ಕುಂಬಾರ-599, ಮರಾಠರು-543, ಜೋಗೆಯರು-486,
ರಂಗಾರ್ಯ-409, ಜೈನರು-389, ಕ್ಷತ್ರಿಯ-483, ಸವಿತ ಸಮಾಜ-271, ಕೊರವರು-205,
ಕೊಂಡಾರಿ-108, ಕೊರಮರು-70, ದಾಸರು-68, ಕಿಳ್ಳೆಕ್ಯಾತ-80, ಮಾರ್ವಾಡಿ-57,
ಸಾಳೇರು-37, ಸಿಂಗ್ಸ್-33, ಶೆಟ್ಟರು-27, ಸಾವಳಗಿ-19, ಕೈಸ್ತರು-19, ಜವಳೆಯರು-15,
ಅಕ್ಕಸಾಲಿಗರು-11, ಭಜಂತ್ರಿ-8, ವೈಷ್ಣವರು-5,ಹೂಗಾರರು-7, ತಮೀಳ್-5, ರಜಪೂತ್-2,
ಹಡಪದ್-4, ರೆಡ್ಡಿ ಸಮುದಾಯ-55, ಸೇರಿ ಒಟ್ಟು 196386,ಮತದಾರರಿದ್ದಾರೆ ಎಂದು
ಮಾಹಿತಿ ನೀಡಿದರು.
ಮೇಲಿರುವ ಜಾತಿಗಳ ಮತದಾರರಲ್ಲಿ ಮೃತಪಟ್ಟವರು, ವಲಸೆ ಹೋದವರನ್ನು ಹೊರತುಪಡಿಸಿಸಮೀಕ್ಷೆ ನಡೆಸಲಾಗಿದೆ. ಇದು ವಾಸ್ತವಾಂಶಕ್ಕೆ ಹತ್ತಿರವಾದ ಸಮೀಕ್ಷೆ ವರದಿ ಇದಾಗಿರುತ್ತದೆ.ಇದರಿಂದ ಮತದಾರರನ್ನು ಭೇಟಿ ಮಾಡಲು ಅನುಕೂಲವಾಗಲಿದೆ. ಕ್ಷೇತ್ರದ ಪ್ರತಿಯೊಂದು
ಸಮುದಾಯವೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಇರುವುದಾಗಿ ಹೇಳಿಕೊಳ್ಳುತ್ತಿದ್ದಾರೆ.
ಆದರೆ ವಾಸ್ತವವೇ ಬೇರೆ ಇರುತ್ತದೆ, ಹೆಚ್ಚಿನ ಸಂಖ್ಯೆ ಹೇಳಿದ ತಕ್ಷಣವೇ ಮತದಾರರ ಪಟ್ಟಿ
ಹೆಚ್ಚಾಗುವುದಿಲ್ಲ. ವಾಸ್ತವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಇದರಿಂದ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ನೀಡಲು ಸುಲಭವಾಗುತ್ತದೆ ಎಂದರು.
ನಮ್ಮ ಪಕ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ತಮ್ಮ ಅಧಿಕಾರಾವಧಿಯಲ್ಲಿ ಜಾತಿ ಗಣತಿ ಸಮೀಕ್ಷೆಯನ್ನು ಮಾಡಿಸಿದ್ದರು, ಆದರೆ ಅದು ಇದುವರೆಗೂ ಬಿಡುಗಡೆಗೊಂಡಿಲ್ಲ. ಆ ವರದಿ ಪ್ರಕಟವಾದಲ್ಲಿ ವಾಸ್ತವ ಬಯಲಿಗೆ ಬರಲಿದೆ. ಇದರಿಂದ ಯಾವ ಯಾವ ಸಮುದಾಯಕ್ಕೆ ಎಷ್ಟು ಸೌಲಭ್ಯ ಕೊಡಬೇಕು ಎನ್ನುವುದು ಸುಲಭವಾಗಲಿದೆ. ನಾನೇ ಚುನಾವಣೆ ಹಿತದೃಷ್ಠಿಯಿಂದ ಮತದಾರರ ಜಾತಿ ಗಣತಿ ಮಾಡಿಸಿದ್ದೇನೆಯೇ ಹೊರತು ಇದು ಜಾತಿ ಗಣತಿ ಅಲ್ಲ ಎಂದು ಸ್ಪಷ್ಟನೆ
ನೀಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕರು ಇರುವ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಈ ತರಹದ ಒಂದು ಸಮೀಕ್ಷೆಯನ್ನು ನಡೆಸಿದರೆ ಪ್ರತಿಯೊಂದು ಕ್ಷೇತ್ರದಲ್ಲಿ ಆಯಾ ಜಾತಿವಾರು ಸ್ಪಷ್ಟವಾದಂತಹ ಮಾಹಿತಿ ದೊರೆತರೆ ಅವರ ಅಭಿವೃದ್ಧಿ ಗೆ ಕ್ರಮಕೈಗೊಳ್ಳಲು ಈ ಸಮೀಕ್ಷೆ ವರದಿ ಸಹಕಾರಿಯಾಗಲಿದೆ ಎಂದು ಹೇಳಿದರಲ್ಲದೇ ರಾಜ್ಯದಲ್ಲೇ ಈ ತರಹದ ಸಮೀಕ್ಷೆ ವರದಿ ಮಾದರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ತಂದೆ ಎಂ.ಟಿ.ಬಸವಗೌಡ ಅವರು ಉಚ್ಚಂಗಿದುರ್ಗ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಗೆಲುವು ಪಡೆದು ಅನೇಕ ಅಭಿವೃದ್ದಿ ಕೆಲಸಗಳನ್ನುಮಾಡಿದ್ದಾರೆ. ಅಲ್ಲದೇ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಜನಪರವಾಗಿ ಬದುಕಿದ್ದವರು. ಜನರ ನಡುವೆ ಇದ್ದ ನಮ್ಮ ತಂದೆಯವರು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಗೆ ಕಾಂಗ್ರೆಸ್
ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಳೆದ 8 ತಿಂಗಳ ಹಿಂದೆ ಕೊರೊನಾ ಮಹಾಮಾರಿ ಸೋಂಕಿನಿಂದ ಮೃತರಾಗಿದ್ದಾರೆ. ಅವರ ಎಲ್ಲಾ ಕೆಲಸ ಕಾರ್ಯಗಳನ್ನು ನಾನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದರು.

ನನ್ನ ತಂದೆಯ ನಿಧನ ನಂತರ ಹರಪನಹಳ್ಳಿ ಕ್ಷೇತ್ರದಲ್ಲಿ ಹಗಲಿರುಳು ಸಂಚರಿಸಿ ಜನರಿಗೆ ಚಿರಪರಿಚಿತನಾಗಿದ್ದೇನೆ. ನಾನು ಎಲ್ಲೆ ಹೋದರೂ ಮನೆಯ ಮಗನಂತೆ ಸ್ವಾಗತಿಸುತ್ತಾರೆ. ಜನರ ಪ್ರೀತಿ, ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನನ್ನ ತಂದೆಗೆ ಸಹಕಾರ ನೀಡಿದಂತೆ ನನಗೂ ಕೂಡ ಬೆಂಬಲಿಸುವ ಮೂಲಕ ನನಗೆ ಅಶೀರ್ವಾದಿಸಬೇಕು ಎಂದು ಮನವಿ ಮಾಡಿದರು.

ಅದೇನೆಯಿರಲಿ ಸರ್ಕಾರದ ಹಂತದಲ್ಲೇ ನೆನೆಗುದಿಗೆ ಬಿದ್ದಿರುವ ಜಾತಿ ಗಣತಿ ಸಮೀಕ್ಷೆ ಮತ್ತು ಜಾತಿವಾರು ಮತದಾರರ ಗಣತಿ ಸಮೀಕ್ಷೆಯನ್ನು ತಾಲೂಕಿನ ಹಂತದಲ್ಲಿ ನೆಡೆಸಿರುವುದು ಮತ್ತು ಅದನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿರುವುದು ಇವರು ಇಟ್ಟ ದಿಟ್ಟ ಹೆಜ್ಜೆಯಾಗಿದೆ ಎಂದೇ ಹೇಳಲಾಗುತ್ತದೆ.
ಈ ರೀತಿಯ ವರದಿಯು ಎಷ್ಟು ನಿಜ ಮತ್ತು ನಿಖರ, ಹಾಗೂ ವಸ್ತುನಿಷ್ಠ ವಾಗಿದೆಯೋ ಎಂಬುದನ್ನು ಹೇಳುವ ಪ್ರಯತ್ನ ಮತ್ತು ಧೈರ್ಯ ಮಾಡಿರುವುದು ಇಲ್ಲಿ ಗಮನಾರ್ಹ ಆದ್ದರಿಂದ ಸರ್ಕಾರ ಅಧಿಕೃತವಾಗಿ ಸಮೀಕ್ಷೆಯನ್ನು ನಡೆಸಿ ವರದಿಯನ್ನು ತಯಾರಿಸಿ ಸ್ಪಷ್ಟಪಡಿಸಿ ಅದನ್ನು ಬಹಿರಂಗಗೊಳಿಸಿದಾಗ ಮಾತ್ರ ಅದು ಮಾನ್ಯವಾಗುತ್ತದೆ ಎಂಬುದಂತೂ ಸತ್ಯ.

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ ಎಲ್ಲಾ ಸಮಾಜದ ಮತದಾರರಿದ್ದಾರೆ ಆದರೆ ಯಾವ ಸಮುದಾಯದ ಜನರು ಎಷ್ಟು ಇದ್ದಾರೆ ಎಂಬುದನ್ನು ನಿಖರವಾಗಿ ಹೇಳಲು ಇಲ್ಲಿಯ ವರೆಗೆ ಅದು ಸಾಧ್ಯವಾಗಿದ್ದಿಲ್ಲ ಆದರೆ ಕಾಂಗ್ರೆಸ್ ಮುಖಂಡ ಯಶವಂತ್ ಗೌಡರವರು ಒಂದು ಹೆಜ್ಜೆ ಮುಂದೆ ಹೋಗಿ ವೈಯಕ್ತಿಕವಾಗಿ ಮತದಾರರ ಜಾತಿ ಗಣತಿ ಸಮೀಕ್ಷೆಯನ್ನು ನಡೆಸಿರುವುದು ಸ್ವಾಗತಾರ್ಹ ಮತ್ತು ಒಂದು ಹೊಸ ಮೈಲಿಗಲ್ಲನ್ನು ಅವರು ನೆಟ್ಟಿದ್ದಾರೆ ಎಂದೇ ಹೇಳಬಹುದು ಆದರೆ ಇದರಲ್ಲಿ ಇರುವ ಅಂಕಿಅಂಶಗಳನ್ನು ಒಪ್ಪಿಕೊಳ್ಳುವುದು ಬಿಡುವುದು ಆಯಾ ಜಾತಿಯ ಮುಖಂಡರುಗಳ ವಿವೇಚನೆಗೆ ಬಿಟ್ಟವಿಚಾರವಾಗಿದೆ ಎಂದರೆ ತಪ್ಪಾಗಲಾರದು.

Leave a Reply

Your email address will not be published. Required fields are marked *