September 18, 2024

Vijayanagara Express

Kannada News Portal

ಸಂಭ್ರಮದಿಂದ ಜರುಗಿದ ಊರಮ್ಮದೇವಿಯ ಜಾತ್ರೋತ್ಸವ

1 min read

ಸಂಭ್ರಮದಿಂದ ಜರುಗಿದ ಊರಮ್ಮ ದೇವಿಯ ಜಾತ್ರೋತ್ಸವ

 

ವಿಶೇಷ ವರದಿ ಹರಪನಹಳ್ಳಿ ತಿಮ್ಮಣ್ಣ ವೆಂಕಟೇಶ್

 

ಹರಪನಹಳ್ಳಿ: ತಾಲೂಕಿನ ಕಂಚಿಕೇರಿ ಗ್ರಾಮದ ಗ್ರಾಮದೇವತೆ ಯಾದ ಊರಮ್ಮದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಮೂರನೇ ದಿನವಾದ ಗುರುವಾರ ಗ್ರಾಮದಲ್ಲಿ ದೇವಿಯ ಜಾತ್ರಾರಥೋತ್ಸವವು ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

ದಿನಾಂಕ 8,9,10ನೇ ತಾರೀಖಿನಂದು ಆಯೋಜಿಸಲಾಗಿದ್ದ ಗ್ರಾಮದ ಗ್ರಾಮದೇವತೆ ಹಬ್ಬವನ್ನು ಅತ್ಯಂತ ಭಕ್ತಿಪೂರ್ವಕ ಸಡಗರ-ಸಂಭ್ರಮದಿಂದ ಜನರು ಜಾತ್ರೆಯಲ್ಲಿ ಪಾಲ್ಗೊಂಡು ಆಚರಿಸಿದರು.

ಜಾತ್ರೆಯ ಹಿನ್ನೆಲೆ

ಗ್ರಾಮ ದೇವತೆಯಾದ ಶ್ರೀ ಊರಮ್ಮ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಪ್ರತಿ ಐದು ವರ್ಷಕ್ಕೊಮ್ಮೆ ಅಥವಾ ಮೂರು ವರ್ಷಕ್ಕೊಮ್ಮೆ ಅಥವಾ 9 ವರ್ಷಕ್ಕೊಮ್ಮೆ ಜರುಗುವುದು ವಾಡಿಕೆ ಈ ಬಾರಿ ಆಚರಿಸಿದ ಜಾತ್ರಾಮಹೋತ್ಸವ ಒಂಭತ್ತು ವರ್ಷದ ಅವಧಿಯಲ್ಲಿ ಜರಗಿದೆ. ಈ ಜಾತ್ರಾಮಹೋತ್ಸವವನ್ನು ಆಚರಿಸಲು ಪ್ರಮುಖ ಕಾರಣ ಮಳೆ-ಬೆಳೆ ಸಮೃದ್ಧಿ ಆಗಲಿ ಮತ್ತು ಊರಿಗೆ ಒಳ್ಳೇಯದಾಗಲಿ ಎಂದು, ಪ್ರತಿ 5 ಅಥವಾ 3ಅಥವಾ 9 ವರ್ಷಗಳ ಅವಧಿಗೆ ಆಚರಿಸಬಹುದಾದ ಆಚರಣೆ ಪದ್ದತಿ ಇಲ್ಲಿ ಇರುತ್ತದೆ . ವಿಶಿಷ್ಟವಾದ ರೀತಿಯಲ್ಲಿ ಸಂಪ್ರದಾಯ ಮತ್ತು ರೂಢಿಗಳನ್ನು ಅನುಸರಿಸಿ ಹಬ್ಬವನ್ನು ಆಚರಿಸಲಾಗುತ್ತದೆ ತಳವಾರರು ,ಬಾರಿಕರು , ಹರಿಜನರು ,ಕಾಳಿಯವರು ,ಈ ಎಲ್ಲಾ ಆಯಗಾರರ ಮನೆಯಿಂದ ಗಟ್ಟಿ ಕೇಲುಗಳನ್ನು ತಂದು ಚೌತಮನೆಯ ಕಟ್ಟೆಯನ್ನು ಕಟ್ಟಿ ನಾಲ್ಕು ಮೂಲೆಗಳಲ್ಲಿ ಕೇಲುಗಳನ್ನಿಟ್ಟು ಪೂಜೆ ಮಾಡಿ ನಂತರ ದೇವಿಯ ಕಾರ್ಯಕ್ರಮವನ್ನು ನಡೆಸಲಾಗುವುದು ಕೊಪ್ಪರಿಗೆಯಲ್ಲಿ ಬೇಯಿಸಿದ (ಚರುಗದ ಕಾಳು) ಜೋಳದ ಕಾಳನ್ನು ( ಚಿಬ್ಬಲಿ ) ಬಿದಿರಿನಪುಟ್ಟಿಯಲ್ಲಿ ಹಾಕಿಕೊಂಡು ಹುಲಿಗ್ಯೋ ಹುಲಿಗ್ಯೋ ಎಂದು ಕೂಗುತ್ತಾ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೇಯಿಸಿದ ಕಾಳನ್ನು ಚೆಲ್ಲುತ್ತಾ ಸಾಗುತ್ತಾರೆ ಇದನ್ನೇ ಚರುಗ ಹರಿಯುವುದು ಎಂದು ಕರೆಯುತ್ತಾರೆ. ನಂತರ ಊರಿನ ಸುತ್ತಲೂ ಈ ರೀತಿಯಾಗಿ ಸಂಚರಿಸಿ ಕಾಳನ್ನು ಚೆಲ್ಲಿ ದೇವಿಯ ಮುಂದೆ ಬಂದು ನೆಲೆಯೂರಿ ನಿಲ್ಲುತ್ತಾರೆ ಇದನ್ನು ಚೇರಗದ ನೆಲೆ ಎನ್ನುತ್ತಾರೆ ಇದು ಈ ಎಲ್ಲಾ ಕಾರ್ಯಕ್ರಮಗಳು ಮಂಗಳವಾರ ಸಂಜೆಯಿಂದ ಬುಧವಾರ ಬೆಳಗ್ಗೆ 7ಘಂಟೆಯ ಅವಧಿಯಲ್ಲಿ ನಡೆಯುತ್ತಿವೆ.

ನಂತರ ಬುಧವಾರ ಬೆಳಗ್ಗೆ 9 ಗಂಟೆಯಿಂದ ಜನರುಗಳು ತಮ್ಮ ಮನೆಯಿಂದ ಶ್ರದ್ಧೆ-ಭಕ್ತಿಯಿಂದ ದೀಟ ನಮಸ್ಕಾರ, ಬೇವಿನ ಹುಡುಗೆ ಮತ್ತು ಲೆಕ್ಕಿಸೊಪ್ಪಿನ ಹುಡುಗೆ ಹುಟ್ಟು ಭಕ್ತಿಯನ್ನು ಸಮರ್ಪಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಪ್ರತಿಯೊಂದು ಮನೆಗಳಲ್ಲಿಯೂ ಸಿಹಿತಿನಿಸುಗಳನ್ನು,ಖಾದ್ಯಗಳನ್ನು ತಯಾರಿಸಿ ವಿವಿಧ ಬಗೆಯ ಅಡುಗೆಗಳನ್ನು ಮಾಡಿ ದೇವರಿಗೆ ನೈವೇದ್ಯ ಸಮರ್ಪಿಸಿ ಜನರು ಹಬ್ಬವನ್ನು ಆಚರಿಸುತ್ತಾರೆ.

 

ಗುರುವಾರದ  ಕಾರ್ಯಕ್ರಮಗಳು

ಹಬ್ಬದ ಮೂರನೇ ದಿನವಾದ ಗುರುವಾರದಂದು ದೇವಿಯ ಚೌತಮನೆಯ ಅಣಕಾರ( ಅಣಕುಕಾರ) ಬಣಕಾರರ ಮತ್ತು ಗಾವು ಜಿಗಿಯುವ , ಹಾಸ್ಯಗಾರರು ,ಪೋತರಾಜರು ಮುಂತಾದ ಬಾಬುದಾರರ ಕಾರ್ಯಕ್ರಮಗಳು ನಡೆಯುತ್ತವೆ ನಂತರ ಮಧ್ಯಾಹ್ನ 3 ಘಂಟೆಯ ಮೇಲೆ ಊರಮ್ಮದೇವಿಯ ಮೂರ್ತಿ ರಥದೊಂದಿಗೆ ಮೆರವಣಿಗೆ ಆರಂಭವಾಗುತ್ತದೆ ಸಹಸ್ರಾರು ಜನರ ಸಮ್ಮುಖದಲ್ಲಿ ರಥೋತ್ಸವವು ಬಾಳೆಹಣ್ಣುಗಳನ್ನು ಎಸೆಯುವ ಮೂಲಕ ಜನರು ಭಕ್ತಿಯನ್ನು ಸಮರ್ಪಿಸುತ್ತಾರೆ
ಗ್ರಾಮಕ್ಕೆ ಊರುಗಳಿಂದ ಪ್ರತಿಯಾಂದು ಮನೆ ಮನೆಗೂ ನೆಂಟರಿಷ್ಟರು ಬಂದಿರುತ್ತಾರೆ ತುಂಬಾದಿನಗಳಿಂದ ಊರಿಗೆ ಬರಲಾಗದಿದ್ದ ಬಂಧುಗಳೆಲ್ಲರೂ ಈ ಹಬ್ಬಕ್ಕೆ ಖಡ್ಡಾಯವಾಗಿ ಬಂದು ಪಾಲ್ಗೊಳ್ಳುವುದು ವಿಶೇಷ ಕಳೆದ ಬಾರಿ ಈ ಹಬ್ಬವನ್ನು 2012ರ ಮಾರ್ಚ್ ತಿಂಗಳಲ್ಲಿ ಆಚರಿಸಲಾಗಿತ್ತು .

ಶುಕ್ರವಾರದ ಕಾರ್ಯಕ್ರಮ

ಶುಕ್ರವಾರ ಮಧ್ಯಾಹ್ನ 3 ಘಂಟೆಯ ನಂತರ ದೇವಿಯು ಚೌತಮನಿಕಟ್ಟೆಯಿಂದ ಗಂಗೆ ಪೂಜೆ ನೆರವೇರಿಸಿ ಕೊಂಡು ಮೆರವಣಿಗೆ ಮೂಲಕ ಗ್ರಾಮದ ರಾಜಬೀದಿಯಲ್ಲಿ ಸಾಗಿ ರಾತ್ರಿ 12 ಘಂಟೆಯ ಸುಮಾರಿಗೆ ದೇವಿಯು ಗುಡಿ ತುಂಬುವುದು ಇಲ್ಲಿಯ ಸಾಂಪ್ರದಾಯವಾಗಿದೆ . ಈ ವೇಳೆ ಗ್ರಾಮದ ಎಲ್ಲಾ ಹಿರಿಯರು , ಮಹಿಳೆಯರು , ಯುವಕರು , ಬಂಧು ಬಾಂಧವರು ಜಾತಿ ಭೇದವಿಲ್ಲದೆ ಮೆರವಣಿಗೆಯಲ್ಲಿ ಪಾಲ್ಗೊಂಡು ಹಬ್ಬದ ಕಳೆಯನ್ನು ಮತ್ತೊಂದಿಷ್ಟು ಇಮ್ಮಡಿಗೊಳಿಸಿದರು ಹಬ್ಬದ ಸಡಗರ ಸಂಭ್ರಮ ಜನರ ಮೊಗದಲ್ಲಿ ಕಳೆಕಟ್ಟಿ ಜನರ ಮನದಲ್ಲಿ ಖುಷಿ ಮನೆಮಾಡಿತ್ತು ಗ್ರಾಮದಹಿರಿಯ ಮಹಿಳೆಯರು ಮೆರವಣಿಗೆಯಲ್ಲಿ ಸೇರಿ ದೇವಿಯ ಮೇಲಿನ  ಜಾನಪದ ಶೈಲಿಯ ಸೊಭಾನೆ ಹಾಡುಗಳನ್ನು  ಹಾಡುತ್ತಿರುವುದಕ್ಕೆ  ನೆರೆದಿದ್ದ ಜನರೆಲ್ಲ  ಭಕ್ತಿಯಿಂದ ತಲೆದೂಗಿ  ಹೆಜ್ಜೆ ಹಾಕುತ್ತಾ  ಭಾವಪರವಶರಾದರು.

ಒಟ್ಟಾರೆಯಾಗಿ ಪುರಾತನ ಕಾಲದಿಂದ ಆಚರಿಸಿಕೊಂಡು ಬಂದಿರುವ ಈ ಹಬ್ಬವು ಗ್ರಾಮದಲ್ಲಿ ಒಂದು ಕಳೆಯನ್ನು ನಿರ್ಮಾಣ ಮಾಡಿರುತ್ತದೆ ಹಬ್ಬವನ್ನು ಆಚರಿಸಿದ ಗ್ರಾಮಸ್ಥರಲ್ಲಿ ವಿವಿಧತೆಯಲ್ಲಿ ಏಕತೆ ಮತ್ತು ಸಮಗ್ರತೆ ಉಂಟಾಗುತ್ತದೆ ಎಂಬುದು ಗ್ರಾಮದ ಗ್ರಾಮಸ್ಥರ ನಂಬಿಕೆಯಾಗಿದೆ.

ಜಾತ್ರೆಯ ರಥೋತ್ಸವ ಕಾರ್ಯಕ್ರಮದಲ್ಲಿ ಊರಿನ ಮುಖಂಡರಾದ ಶಾನುಭೋಗರ ಕೆಂಚಪ್ಪ,ಪಾಟಿಲ್ ಕೆಂಚನಗೌಡ ,ಕ್ಯಾರಕಟ್ಟಿ ಬಸವರಾಜಪ್ಪ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ರು , ಶಾನುಭೋಗರ ಮಲ್ಲೆಪ್ಪ , ದಾನಮ್ಮನವರ ದೊಡ್ಡ ಕೊಟ್ರೇಶ್,ಕ್ಯಾರಕಟ್ಟಿ ದೊಡ್ಡಬಸವರಾಜಪ್ಪ ,ಬಾರಿಕರ ಮಂಜಪ್ಪ, ಜೋಗಪ್ಳ ಮಂಜಪ್ಪ, ಮರಿಯಪ್ಳ ಕೆಂಚಪ್ಪ,ಭೀಮಪ್ಳ ಅಂಜಿನಪ್ಪ,ಜೋಗಪ್ಳ ಬಸಪ್ಪ,ಕಲ್ಲಹಳ್ಳಿ ಸಿದ್ದಿರಪ್ಪ ,ದಾನಮ್ಮನವರ ಕೊಟ್ರಪ್ಪ, ಪಟ್ಟಣಶೆಟ್ಟಿ ಬಸವರಾಜಪ್ಪ,ಶಾನುಭೋಗರ ಜಾತಪ್ಪ,ತಿಮ್ಮೊಳ ದೇವಿಂದ್ರಪ್ಪ,ಈಡಿಗರ ವೆಂಕಟೇಶ್ ಯುವರತ್ನ ಪತ್ರಿಕೆ ಸಂಪಾದಕರು,ಜಿಟ್ಟಿನಕಟ್ಟಿ ಚೆನ್ನಬಸಪ್ಪ,ಶಾಹನಭೋಗರ ವಾಮಣ್ಣ  ,ಮಾಳ್ಗಿ ಕೆಂಚಪ್ಪ, ಕಾಳಿ ನೀಲಪ್ಪ , ಗುರಿಕಾರ ನಾಗರಾಜಪ್ಪ,ಭೋವಿ ಚಿನ್ನಪ್ಪ, ಬೆಟ್ಟಪ್ಳ ಪಕ್ಕಿರಪ್ಪ, ಗಂಗನರಸಿ ನಾಗರಾಜ್, ಮಡಿವಾಳರ ಬಸವರಾಜಪ್ಪ ನಿವೃತ್ತ ಶಿಕ್ಷಕರು,ಸೊಪ್ಪಿನ ರಾಜಪ್ಪ, ಬಿದ್ರಿ ಸುನಿಲ್ ಕುಮಾರ್,ಕೆ ಲಿಂಗರಾಜ್ , ಪಟ್ಟಣಶೆಟ್ಟಿ ನಾಗರಾಜ್,ಅಣಜಿ ಸಂಗಪ್ಪ,ಅಕ್ಕಸಾಲಿ ವಿರೇಶಪ್ಪ,ಗ್ರಾಮದ ಶೆಟ್ರು ಕರಿಬಸಪ್ಪ, ಬಡೀಗೇರ ಭೀಮಾಚಾರಿ, ಗಂಗನರಸಿ ಕೆಂಚಪ್ಪ ,ಟಿ ಮಂಜುನಾಥ್ ಮಾಜಿ ಗ್ರಾಮಪಂಚಾಯಿತಿ ಅದ್ಯಕ್ಷರು , ಎಂ ಬಸವರಾಜ ಮಾಜಿ ಗ್ರಾಮಪಂಚಾಯಿತಿ ಅದ್ಯಕ್ಷರು, ಅಂಗಡಿ ಹಾಲೇಶ್ ,ಮುಂತಾದವರು ಪಾಲ್ಗೊಂಡಿದ್ದರು.

 

 

Leave a Reply

Your email address will not be published. Required fields are marked *