ಆದಿವಾಸಿ ಬುಡಕಟ್ಟು ಸಮುದಾಯಗಳ ಮೀಸಲು ಹಣವನ್ನು ವಾಲ್ಮೀಕಿ ಜಾತ್ರೆಗೆ ಬಿಡುಗಡೆ ಮಾಡದಂತೆ ಮನವಿ
1 min readಆದಿವಾಸಿ ಬುಡಕಟ್ಟು ಸಮುದಾಯಗಳ ಮೀಸಲು ಹಣವನ್ನು ವಾಲ್ಮೀಕಿ ಜಾತ್ರೆಗೆ ಬಿಡುಗಡೆ ಮಾಡದಂತೆ ಮನವಿ.
ಹರಪನಹಳ್ಳಿ : — ಆದಿವಾಸಿ ಅಥವಾ ಬುಡಕಟ್ಟು ಸಮುದಾಯಗಳ ಅಭಿವೃದ್ದಿಗೆ ಮೀಸಲಿಟ್ಟ ಅನುದಾನವನ್ನು ವಾಲ್ಮೀಕಿ ಜಾತ್ರೆಗೆ ಬಿಡುಗಡೆ ಮಾಡದಂತೆ ಕೋರಿ ಮ್ಯಾಸ ನಾಯಕ ಮತ್ತು ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.
ಪಟ್ಟಣದ ಮಿನಿ ವಿಧಾನ ಸೌಧ ಸಹಾಯಕ ಆಯುಕ್ತರ ಉಪ ವಿಭಾಗ ಕಚೇರಿಗೆ ಮಂಗಳವಾರ ತೆರಳಿ ಮನವಿ ಪತ್ರ ಸಲ್ಲಿಸಿದ ಅವರು, ಕರ್ನಾಟಕದಲ್ಲಿ 50ಕ್ಕೂ ಹೆಚ್ಚು ಬುಡಕಟ್ಟು ಉಪ ಪಂಗಡಗಳಿವೆ. ಸಂವಿಧಾನ ದತ್ತವಾಗಿ ಅಂತಹ ಪಂಗಡಗಳ ಅಭಿವೃದ್ಧಿಗಾಗಿ ಅನುದಾನ ಮೀಸಲಿಡಲಾಗುತ್ತಿದೆ. ಆದರೆ ಸರ್ಕಾರದ ಆಶೋತ್ತರವನ್ನು ಗಾಳಿಗೆ ತೂರಿ , ಮುಂದುವರೆದ ಜನಾಂಗದ ಜಾತ್ರಾ ಮಹೋತ್ಸವಕ್ಕೆ ಕೊಡುತ್ತಿರುವುದು ಔಚಿತ್ಯವಲ್ಲ ಎಂದು ಬುಡಕಟ್ಟು ಜನಾಂಗದ ಸಂಘಟನಾ ಸಂಚಾಲಕ ವಕೀಲ ಬುಮ್ಮೋಳ ಕರಿಯಪ್ಪ ಅರೋಪಿಸಿದರು.
ಪರಿಶಿಷ್ಟ ಪಂಗಡದವರ ಅನುದಾನವನ್ನು ಈ ಹಿಂದೆ ವಾಲ್ಮೀಕಿ ಜಾತ್ರೆಗೆ ನೀಡಿರುವ ಮಾಹಿತಿ ಇದೆ . ಇದರಿಂದ ಕೂಡಲೇ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಿಂದ ನೀಡಿರುವ ಅನುದಾನವನ್ನು ವಸೂಲಾತಿ ಮಾಡಬೇಕು.ಬುಡಕಟ್ಟು ಜನರ ಅಭಿವೃದ್ದಿಗೆ ಉಪಯೋಗಿಸಬೇಕೆಂದು ಮನವಿ. ಮಾಡಿದ್ದಾರೆ.
ಭಾರತೀಯ ಸಂವಿಧಾನದಲ್ಲಿ ಆದಿವಾಸಿ ಅಥವಾ ಬುಡಕಟ್ಟು ಜನರಿಗೆ ವಿಶೇಷ ಸ್ಥಾನವನ್ನು ನೀಡಿ ಬುಡಕಟ್ಟು ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅನುಕೂಲ ಮಾಡಿಕೊಟ್ಟಿದೆ. ಆದರೂ ಕೂಡ ಸ್ವಾತಂತ್ರ ಬಂದು 7ದಶಕ ಕಳೆದರೂ ಬುಡಕಟ್ಟು ಜನರ ಶಿಕ್ಷಣ, ಆರೋಗ್ಯ , ವಸತಿ, ಸ್ವಯಂ ಉದ್ಯೋಗ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿಲ್ಲ. ಆದರೆ ಸರ್ಕಾರ ಮೀಸಲಿಟ್ಟಿರುವ ಅನುದಾನವನ್ನು ಗುರುಪೀಠಕ್ಕೆ ಕೊಟ್ಟಿರುವುದುಎಷ್ಟು ಸರಿ ? ಬುಡಕಟ್ಟು ಜನರ ಕೋಟಿಗಟ್ಟಲೇ ಅನುದಾನವನ್ನು ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಇದರಿಂದ ಈ ಬಗ್ಗೆ ಸೂಕ್ತ ತನಿಖೆ ಅಗತ್ಯ ಎಂದಿದ್ದಾರೆ .
ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷಿಸಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಬುಡಕಟ್ಟು ಜನಾಂಗದ ಸಂಘಟನಾ ಸಂಚಾಲಕ ವಕೀಲ ಬುಮ್ಮೋಳ ಕರಿಯಪ್ಪ ಎಚ್ಚರಿಸಿದ್ದಾರೆ .
ಈ ಸಂದರ್ಭದಲ್ಲಿ ದಾಸ್ತಾನಿ. ಮಂಜುನಾಥ,ಡಿ.ಮಲ್ಲಿಕಾರ್ಜುನ,ಡಿ.ಕೃಷ್ಣಪ್ಪ, ಜಿ.ದಾಳೇಪ್ಪ,ಜಿ.ಪಾಲಪ್ಪ,ದಸ್ತಾನಿ ವೆಂಕಟೇಶ್,ಎಂ.ದ್ವಾರಕೀಶ್, ಡಿ.ಓಬಪ್ಪ,ಕರಿಯಪ್ಪ ಮುಂತಾದವರು ಇದ್ದರು.