Vijayanagara Express

Kannada News Portal

ಕಗ್ಗಂಟಾದ ಕಾಂಗ್ರೆಸ್ ಕಲಹ l ರಾಜ್ಯನಾಯಕರಿಗೆ ತಲೆ ಬಿಸಿಯಾದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರ.

1 min read

ಕಗ್ಗಂಟಾದ ಕಾಂಗ್ರೆಸ್ ಕಲಹ: ರಾಜ್ಯ ನಾಯಕರಿಗೆ ತಲೆ ಬಿಸಿಯಾದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರ!

ವಿಶೇಷ ವರದಿ

ಪಟ್ನಾಮದ ವೆಂಕಟೇಶ್, ಹರಪನಹಳ್ಳಿ

ಹರಪನಹಳ್ಳಿ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿ ಗುಂಪುಗಾರಿಕೆ ಶುರುವಾಗಿ ಐದು ಗುಂಪುಗಳಾಗಿ ಒಡೆದು ಛಿದ್ರ ಛಿದ್ರವಾಗಿರುವುದು ಗುಟ್ಟಾಗಿ ಉಳಿದಿಲ್ಲ.

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಾರಥಿಯಾಗಿದ್ದ ಎಂ.ಪಿ.ರವೀಂದ್ರ ಅವರ ಆಕಾಲಿಕ ಮರಣದ ನಂತರ ಅವರ ಹಿರಿಯ ಸಹೋದರಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ಸಹೋದರನ ಸ್ಥಾನ ತುಂಬಿ ಪಕ್ಷ ಚಟುವಟಿಕೆ ಮುಂದುವರೆಸಿದ್ದಾರೆ. ಮತ್ತೊಂದೆಡೆ ಹರಪನಹಳ್ಳಿ ಮಾಜಿ ಶಾಸಕ ಪಿ.ಟಿ.ಪರಮೇಶರನಾಯ್ಕ ಅವರ ಬೆಂಬಲಿಗರ ಗುಂಪು ಸಂಘಟನೆಗೆ ಇಳಿದಿದೆ. ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿಕೊಂಡಿರುವ ತಾಲೂಕಿನ ಶಂಕ್ರನಹಳ್ಳಿ ಗ್ರಾಮದ ಡಾ.ಉಮೇಶ್‌ಬಾಬು ಮತ್ತು ದಾವಣಗೆರೆ ನಗರಸಭೆ ಮಾಜಿ ಅಧ್ಯಕ್ಷ ಎಂ.ಜಿ.ತಿಪ್ಪೇಸ್ವಾಮಿ ಅವರ ಪುತ್ರ ಎಂ.ಟಿ.ಸುಬಾಸ್‌ಚಂದ್ರ ಕಚೇರಿ ತೆರೆದು ಯಾವಗಲೋ ಒಮ್ಮೆ ಬಂದು ಹೋಗುತ್ತಿರುತ್ತಾರೆ. ಹಾಗೂ ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಹೆಸರಿನಲ್ಲಿ ಕಚೇರಿ ತೆರೆದಿರುವ ಎಂ.ಪಿ.ರವಿಂದ್ರ ಅವರ ಕಿರಿಯ ಸಹೋದರಿ ಎಂ.ಪಿ.ವೀಣಾ ಮಹಾಂತೇಶ್ ರವರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಆಕಾಂಕ್ಷಿಯಾಗಿದ್ದಾರೆ.

ಈಚೆಗೆ ಉಚ್ಚಂಗಿದುರ್ಗ ಗ್ರಾಮದಲ್ಲಿ ವಿಧಾನ ಪರಿಷತ್ ಚುನಾವಣೆಯ ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಅವರ ಪರವಾಗಿ ನಡೆದ ಬಹಿರಂಗ ಪ್ರಚಾರ ಸಭೆ ಕಾಂಗ್ರೆಸ್ ಮುಖಂಡರ ವಾಗ್ವಾದಕ್ಕೆ ವೇದಿಕೆಯಾಗಿದೆ. ಈ ವೇಳೆ ಮಾಜಿ ಕಾರ್ಮಿಕ ಸಚಿವ ಪಿ.ಟಿ.ಪರಮೆಶ್ವರ್‌ನಾಯ್ಕ ಮತ್ತು ಎಂ.ಪಿ.ಲತಾ ಮಲ್ಲಿಕಾರ್ಜುನ ಬಣದ ನಡುವೆ ಅಭಿವೃದ್ಧಿ ವಿಚಾರದಲ್ಲಿ ನಡೆದ ಮಾತಿನ ಚಕಮಕಿ ತಾರಕಕ್ಕೆರಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಏಕವಚನದಲ್ಲಿಯೇ ಬೈದಾಡಿಕೊಳ್ಳುವ ಹಂತಕ್ಕೆ ತಲುಪಿದೆ.

ಇದಕ್ಕೆ ಪ್ರಮುಖ ಕಾರಣವೆಂದರೆ ಕಾರ್ಯಕ್ರಮದಲ್ಲಿ ಕಟ್ಟಲಾಗಿದ್ದ ಬ್ಯಾನರ್‌ನಲ್ಲಿ ಮಾಜಿ ಶಾಸಕ ದಿವಂಗತ ಎಂ.ಪಿ.ರವೀಂದ್ರ ಅವರ ಫೋಟೋ ಇಲ್ಲದಿರುವುದನ್ನು ಖಂಡಿಸಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ವೇದಿಕೆಯಿಂದ ಹೊರ ಬಂದಿದ್ದಾರೆ. ಇದರಿಂದ ಬೇಸತ್ತ ಅವರ ಬೆಂಬಲಿಗರು ಇದು ದ್ವೇಷದ ರಾಜಕಾರಣ ಎಂದು ಸಿಟ್ಟಿಗೆದ್ದು ಮಾಜಿ ಸಚಿವ, ಹಡಗಲಿ ಹಾಲಿ ಶಾಸಕ ಪರಮೇಶ್ವರನಾಯ್ಕರಿಗೆ ತರಾಟೆಗೆ ತಗೆದುಕೊಂಡಿದ್ದಾರೆ. ಇದಾದ ನಂತರ ಕೊಂಡಯ್ಯ ರವರು ಎಂ.ಪಿ.ಲತಾ ಮಲ್ಲಿಕಾರ್ಜುನ ಅವರನ್ನು ಸಮಾಧಾನ ಮಾಡಿ ವೇದಿಕೆಗೆ ಬರುವಂತೆ ಆಹ್ವಾನಿಸಿದ್ದಾರೆ. ಇದಕ್ಕೆ ಒಪ್ಪದಿದ್ದ ಎಂ.ಪಿ.ಲತಾ ಅವರು ವೇದಿಕೆ ಕೆಳಗೆ ಕುಳಿತು ಕಾರ್ಯಕ್ರಮ ವೀಕ್ಷಿಸಿ ಬಂದಿದ್ದಾರೆ.

ವೇದಿಕೆಯಲ್ಲಿ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿ, ಹರಪನಹಳ್ಳಿ ತಾಲ್ಲೂಕಿಗೆ ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಯ 371ಜೆ ಕಲಂ ಸೌಲಭ್ಯವನ್ನು ಕೊಡಿಸಿದ್ದು ನಾನೇ,ಮೊದಲು ಇದನ್ನು ಸದನದಲ್ಲಿ ಪ್ರಸ್ತಾಪಿಸಿದವನು ನಾನೇ, ಬೇಕಿದ್ದರೆ ಅದಕ್ಕೆ ದಾಖಲೆ ನೀಡುತ್ತೇನೆ ಎಂದರು. ಇದಕ್ಕೆ ಕೆಂಡಾಮಂಡಲರಾದ ಎಂ.ಪಿ.ರವೀಂದ್ರ ಅಭಿಮಾನಿಗಳು ಪರಮೇಶ್ವರನಾಯ್ಕ ಅವರಿಗೆ ಏಕವಚನದಲ್ಲೇ ಮಾತನಾಡಿದ ಪ್ರಸಂಗ ನಡೆದಿದೆ.

ರಾಜಕಾರಣದ ಗಂಧಗಾಳಿಯೂ ಗೊತ್ತಿಲ್ಲದ, ತಂದೆಯ ಹೆಸರು ಹೇಳಿಕೊಂಡು ಹರಪನಹಳ್ಳಿ ಕ್ಷೇತ್ರಕ್ಕೆ ಕಾಲಿರಿಸಿ ಹರಪನಹಳ್ಳಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಹಾಗೂ ಪಿಟಿಪಿ ಬಣದಲ್ಲಿ ಗುರುತಿಸಿಕೊಂಡಿರುವ ಎಂ.ಟಿ.ಯಶವಂತಗೌಡ ಅವರು ಕಾರ್ಯಕ್ರಮ ಉಸ್ತುವಾರಿ ಹೊತ್ತುಕೊಂಡಿದ್ದರು. ಗಲಾಟೆ ಮಧ್ಯೆ ಬಾಯಿ ಹಾಕಿದ ಅವರು ನಿಮ್ಮನ್ನು(ಹರಪನಹಳ್ಳಿ ಕ್ಷೇತ್ರದ) ಸದಸ್ಯರನ್ನು ಕಾರ್ಯಕ್ರಮಕ್ಕೆ ಅಹ್ವಾನ ನೀಡಿಲ್ಲ. ಇದು ಕೇವಲ ಅರಸೀಕೆರೆ ಹೋಬಳಿಯ 7 ಗ್ರಾಮ ಪಂಚಾಯತ್‌ಗಳ ಕಾರ್ಯಕರ್ತರಿಗೆ ಮಾತ್ರ ಕರೆದಿದ್ದೇವೆ ಎಂದು ಹೇಳಿದರು. ಇದರಿಂದ ಸಿಟ್ಟಿಗೆದ್ದ ಪುರಸಭೆ ಮಾಜಿ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಅವರು ಎಲ್ಲರನ್ನು ಇಲ್ಲಿಗೆ ಬರಲು ಹೇಳಿ ಈಗ ಈ ರೀತಿಯಾಗಿ ಹೇಳುತ್ತೀಯಾ? ಹಾಗಾದರೆ ನೀನು 7 ಪಂಚಾಯ್ತಿ ವ್ಯಾಪ್ತಿಯಲ್ಲಿಯೇ ರಾಜಕಾರಣ ಮಾಡಿಕೋ, ಹರಪನಹಳ್ಳಿಗೆ ರಾಜಕಾರಣ ಮಾಡಲು ಬಂದ್ರೆ ಆಗ ನಾವು ಏನಂತ ನಿನಗೆ ತೋರಿಸ್ತೇವೆ ಎಂದು ಖಾರವಾಗಿ ಹೇಳಿದ್ದಾರೆ.

ನಾನು ಅವೇಶದಲ್ಲಿ ಈ ರೀತಿಯಾಗಿ ಮಾತನಾಡಿದ್ದೇನೆ, ನನ್ನ ಕ್ಷಮಿಸಿ ಅಂತ ಕ್ಷೇಮೆ ಕೇಳಿದ ಯಶವಂತಗೌಡ ಅವರು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವೆ ಎಂದರು. ಒಟ್ಟಿನಲ್ಲಿ ಉಚ್ಚಂಗಿದುರ್ಗದಲ್ಲಿ ನಡೆದ ಕಾರ್ಯಕ್ರಮ ಕೆಲವರಿಗೆ ಹುಚ್ಚು ಬಿಡಿಸುವಂತೆ ಮಾಡಿದೆ. ಪ್ರಾಯಶಃ ಪರಮೇಶ್ವರನಾಯ್ಕರವರು ಹಡಗಲಿ ರಾಜಕಾರಣ ನೋಡಿಕೊಂಡು ಹೋಗಿದ್ದರೆ ಇಂತಹ ಸಮಸ್ಯೆ ಬರುತ್ತಿರಲಿಲ್ಲ. ಹಡಗಲಿ ಜೊತೆಗೆ ಹರಪನಹಳ್ಳಿಯಲ್ಲಿಯೂ ತಿಳಿ ಇರುವ ಮಜ್ಜಿಗೆಯಲ್ಲಿ ಕಡ್ಡಿ ಆಡಿಸುವ ಕೆಲಸ ಮಾಡುತ್ತಿರುವುದರಿಂದ ಕಾಂಗ್ರೆಸ್ ಪಕ್ಷ ಕಲಕಿದ ಮಜ್ಜಿಗೆಯಂತೆ ಆಗಿದೆ ಎಂದು ಕೆಲ ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ .

ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾದ ನಂತರ ಎಂ.ಪಿ.ರವೀಂದ್ರ ಇದ್ದಾಗ ಹರಪನಹಳ್ಳಿ ಕಡೆಗೆ ತಿರುಗಿಯೂ ನೋಡದ ಪರಮೇಶ್ವರನಾಯ್ಕ ಅವರಿಗೆ ಇದ್ದಕ್ಕಿದ್ದಂತೆಯೇ ಇದೀಗ ಹರಪನಹಳ್ಳಿ ಮೇಲೆ ಇನ್ನಿಲ್ಲದ ಪ್ರೀತಿ ಬಂದಿದೆ. ಈ ಪ್ರೀತಿ ಎಂಪಿಪಿ ಕುಟುಂಬದ ಮೇಲಿನ ದ್ವೇಷದಿಂದ ಕೂಡಿದೆ. ಪರಮೇಶ್ವರನಾಯ್ಕ ಅವರಿಗೆ ರವೀಂದ್ರ ಮೇಲಿನ ದ್ವೇಷ ಹರಪನಹಳ್ಳಿ ಕಾಂಗ್ರೆಸ್ ಪಕ್ಷಕ್ಕೆ ಮಗ್ಗಲ ಮುಳ್ಳು ಆಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಿಸಿ 371ಜೆ ಕಲಂ ಸೌಲಭ್ಯಕ್ಕೆ ಪಟ್ಟು ಹಿಡಿದಿದ್ದ ಎಂ.ಪಿ.ರವೀಂದ್ರ ಅವರ ಪ್ರೀತಿಗೆ ಮನಸೋತ ಸಿದ್ದರಾಮಯ್ಯ ಅವರು ಹರಪನಹಳ್ಳಿಯನ್ನು ಪುನಃ ಬಳ್ಳಾರಿಗೆ ಸೇರಿಸಿ 371 ಜೆಕಲಂ ಸೌಲಭ್ಯ ಕಲ್ಪಿಸಿದರು ಎಂದು ಕೆಲ ಕಾಂಗ್ರೆಸ್ ಕಾರ್ಯಕರ್ತರು ರವೀಂದ್ರರವರನ್ನು ಸ್ಮರಿಸುತ್ತಾರೆ .

ಬಹುಷಃ ಅಷ್ಟು ಸುಲಭವಾಗಿ ಹರಪನಹಳ್ಳಿಯನ್ನು ಹೈದ್ರಾಬಾದ್ ಕರ್ನಾಟಕ 371 ಜೆ ಕಾಲಂ ಸೌಲಭ್ಯಕ್ಕಾಗಿ ಸಿದ್ದರಾಮಯ್ಯ ರವರು ಒಪ್ಪುತ್ತಿರಲಿಲ್ಲವೇನೋ ಗೊತ್ತಿಲ್ಲ ಎಂ. ಪಿ. ರವೀಂದ್ರರವರ ಅರೋಗ್ಯ ಸರಿಯಿಲ್ಲದೆ ಮೈಸೂರಿನ ಅಪಲೋ ಆಸ್ಪತ್ರೆಗೆ ದಾಖಲಾಗಿದ್ದರು ಅವರ ಸ್ಥಿತಿ ಬಹಳ ಗಂಭೀರವಾಗಿತ್ತು ಅಂತಹ ಸಂದರ್ಭದಲ್ಲಿ ಆಗ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ರವರು ರವೀಂದ್ರರವರನ್ನು ನೋಡಲು ಅಪೋಲೋ ಆಸ್ಪತ್ರೆಗೆ ಹೋಗಿದ್ದಾಗ ಅವರ ಅರೋಗ್ಯದಲ್ಲಿ ಏರುಪೇರು ಆಗಿ ವೆಂಟಿಲೇಟರ್ ಅಳವಡಿಸಿ ಅವರ ಮೂಗಿಗೆ ಆಮ್ಲಜನಕದ ಪೈಪ್ ನ್ನು ಅಳವಡಿಸಲಾಗಿತ್ತು ರವಿಯವರ ಅರೋಗ್ಯವನ್ನು ಸಿದ್ದರಾಮಯ್ಯರವರು ವಿಚಾರಿಸಿದಾಗ ಸಾವು ಬದುಕಿನ ನಡುವೆ ಹಾಸಿಗೆಯಲ್ಲಿ ಹೋರಾಡುತ್ತಿದ್ದ ಸಂದರ್ಭದಲ್ಲಿಯೂ ಸಹ ಅರೋಗ್ಯದ ವಿಚಾರವನ್ನು ಬಿಟ್ಟು ಸರ್ ಹರಪನಹಳ್ಳಿಗೆ ಹೈದ್ರಾಬಾದ್ ಕರ್ನಾಟಕ 371ಜೆ ಮಾನ್ಯತೆಯನ್ನು ಕೊಡಿ ಎಂದು ಕೇಳಿದಾಗ ಅಲ್ಲಿದ್ದ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರನ್ನು ತರಿಸಿತ್ತು ಇದಕ್ಕೆ ಮರುಕ ವ್ಯಕ್ತಪಡಿಸಿದ ಸಿದ್ದರಾಮಯ್ಯ ನವರು ಸರಿ ಕೊಡೋಣ ಮೊದಲು ನೀನು ಹುಷಾರು ಆಗಯ್ಯ ಆ ಕೆಲಸ ಮಾಡೋಣ ವೆಂದಿದ್ದರಂತೆ ಸಿಂಗಪುರಕ್ಕೆ ಹೋಗಿ ಒಳ್ಳೆ ಚಿಕಿತ್ಸೆ ಪಡೆದು ಆರಾಮ ಆಗಿ ಬಾ ಅದನ್ನು ನಾನು ಮಾಡಿ ಕೊಡುತ್ತೇನೆ ಎಂದು ಹೇಳಿದ್ದರು ಎಂದು ಪ್ರತ್ಯಕ್ಷದರ್ಶಿಯಾಗಿದ್ದ ಕಾರ್ಯಕರ್ತರೊಬ್ಬರು ರವೀಂದ್ರರವರನ್ನು ನೆನೆದು ಭಾವುಕಾರಾಗುತ್ತಾರೆ.

ಹರಪನಹಳ್ಳಿ ತಾಲ್ಲೂಕಿಗೆ ಹೈದ್ರಾಬಾದ್ ಕರ್ನಾಟಕದ 371ಜೆ ಸೌಲಭ್ಯಕ್ಕಾಗಿ ಅದಕ್ಕೂ ಮೊದಲು ಹೋರಾಟಗಾರರು ಮಾಡಿದ ಹೋರಾಟ ಮತ್ತು ರವೀಂದ್ರರವರೆ ಖುದ್ದಾಗಿ ಮೂರು ನಾಲ್ಕು ಬಾರಿ ಸಿದ್ದರಾಮಯ್ಯನವರ ಗಮನಕ್ಕೆ ತಂದಿದ್ದರೂ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರದ  ಸಿದ್ದರಾಮಯ್ಯ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಹೃದಯಮುಟ್ಟುವಂತ  ರವೀಂದ್ರ ರವರ   ಜನಪರ ಕಾಳಜಿ ಮತ್ತು ಕೋರಿಕೆಯೇ  ಈ ಬಾರಿ ಹರಪನಹಳ್ಳಿ ತಾಲೂಕಿಗೆ ಹೈದ್ರಾಬಾದ್ ಕರ್ನಾಟಕ 371ಜೆ ಕಾಲಂ ಸೌಲಭ್ಯ ದೊರೆಯುವಂತೆ  ಮಾಡಿತ್ತು ಎಂಬುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳುತ್ತಾರೆ ಅವರ  ನಿಕಟವರ್ತಿಯೊಬ್ಬರು.

ಹರಪನಹಳ್ಳಿಗೆ 371 ಜೆ ಕಲಂ ಸೌಲಭ್ಯ ಕಲ್ಪಿಸಿದ್ದು ಎಂ.ಪಿ.ರವೀಂದ್ರ ಅಂತ ತಾಲೂಕಿನ ಅಂಗನವಾಡಿಯಲ್ಲಿರುವ ಮಕ್ಕಳನ್ನು ಕೇಳಿದರೂ ಹೇಳುತ್ತಾರೆ. ಆದರೆ ನಾನೇ ಹರಪನಹಳ್ಳಿಗೆ 371 ಜೆ ಕಲಂ ಸೌಲಭ್ಯ ಕೊಡಸಿದ್ದು ಎಂದು ಹೇಳುವ ಮೂಲಕ ಪರಮೇಶ್ವರನಾಯ್ಕ ಅಪಹಾಸ್ಯಕ್ಕೆ ಈಡಾಗಿದ್ದಾರೆ. ಇದು ಸ್ಥಳೀಯ ಹೋರಾಟಗಾರರಿಗೆ ಪರಮೇಶ್ವರ್ ನಾಯ್ಕ್ ಮಾಡಿದ ಅಪಮಾನವಾಗಿದೆ . ಹೋರಾಟಗಾರರು ಹರಪನಹಳ್ಳಿಯನ್ನು ಬಂದ್ ಮಾಡಿ ಮುಷ್ಕರವನ್ನು ಮಾಡಿ ಶಾಸಕರ ಮೇಲೆ ಒತ್ತಡ ತಂದು ಹೋರಾಟವನ್ನು ತೀವ್ರಗೊಳಿಸಿ 371ಜೆ ಸೌಲಭ್ಯ ದ ಹೋರಾಟಕ್ಕೊಂದು ಅರ್ಥ, ಕಾಯ ಕಲ್ಪ ತಂದವರು ಇಲ್ಲಿಯ ಹೋರಾಟಗಾರರು.ಪರಮೇಶ್ವರನಾಯ್ಕ್ ಮಾತು ಕೇಳಿರುವ ಕ್ಷೇತ್ರದ ಜನರು ದಶ ದಿಕ್ಕುಗಳಲ್ಲಿ ಯಾವ ಕಡೆ ಮುಖ ಮಾಡಿ ಯಾವುದರಿಂದ ನಗಬೇಕೋ ಗೊತ್ತಾಗುತ್ತಿಲ್ಲ ಎಂದು ಹುಸಿ ನಗೆ ಬೀರುತ್ತಿದ್ದಾರೆ. ಪರಮೇಶ್ವರನಾಯ್ಕ ಹೇಳಿಕೆ ಒಂದು ರೀತಿ ಆಟವಾಡುವ ಮಕ್ಕಳು ಸೋತ ನಂತವೂ ನಾನೇ ಗೆದ್ದಿದ್ದು ಎಂದು ಹೇಳುವ ಮನಸ್ಥಿತಿ ಹೊಂದಿದ್ದಾರೆ. ‘ಜಟ್ಟಿ ಬಿದ್ದರೂ ಮೀಸೆ ಮಣ್ಣಗಾಲಿಲ’ ಎನ್ನುವ ಗಾದೆ ಮಾತು ಪರಮೇಶ್ವರನಾಯ್ಕ ಅವರಂತವರನ್ನು ನೋಡಿಯೇ ಮಾಡಿರಬೇಕು ಎನ್ನುವುದು ಕೆಲವರ ಅಭಿಪ್ರಾಯ .

ಎಂ.ಪಿ.ರವೀಂದ್ರ ಇವತ್ತು ಮಣ್ಣಾಗಿರಬಹುದು, ಆದರೆ ಅವರು ಮಾಡಿರುವ ಕೆಲಸಗಳು ಸೂರ್ಯ ಚಂದ್ರ ಇರುವವರೆಗೂ ಶಾಶ್ವತವಾಗಿರುತ್ತದೆ ಎಂದು ಕಾಂಗ್ರೆಸ್ ಕಾರ್ಯರ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ ಪರಮೇಶ್ವರನಾಯ್ಕರ ಜೊತೆಗೆ ಇರುವ ಮುಖಂಡರೇ ಪರಮೇಶ್ವರನಾಯ್ಕ ಹೇಳಿಕೆಯಿಂದ ಮುಜುಗರಕ್ಕೆ ಒಳಗಾಗಿದ್ದಾರೆ. ಏಕೆಂದರೆ 371ಜೆ ಕಲಂ ಫೈಲ್ ಹಿಡಿದುಕೊಂಡು ಜೈಕಾರ ಹಾಕಿ ಸುತ್ತಾಡಿದ ಕೆಲವರು ಇಂದು ಪರಮೇಶ್ವನಾಯ್ಕ್ ರವರ ಎಕ್ಕೆಲಗಳಲ್ಲಿ ಸುತ್ತಾಡುತ್ತಿದ್ದಾರೆ. ಒಟ್ಟಿನಲ್ಲಿ 371 ಜೆ ಕಲಂ ವಿಷಯ ಪರಮೇಶ್ವರನಾಯ್ಕರ ವ್ಯಕ್ತಿತ್ವ ಪಾತಾಳಕ್ಕೆ ಹೋಗುವಂತೆ ಮಾಡಿದೆ.

ಪರಮೇಶ್ವರನಾಯ್ಕರ ಅಸಮಂಜಸವಾದ ಹೇಳಿಕೆಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಇರುವುದರಿಂದ ರಾಜ್ಯದ ನಾಯಕರಿಗೆ ಹರಪನಹಳ್ಳಿ ಕ್ಷೇತ್ರ ತಲೆ ಬಿಸಿ ಮಾಡಿದೆ. ಎರಡ್ಮೂರು ಬಾರಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಳಿಗೆ ಇಲ್ಲಿಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪರಮೇಶ್ವರನಾಯ್ಕರ ವಿರುದ್ದ ದೂರು ಹೇಳಿ ಹೋಗಿದ್ದು ಜಗಜ್ಜಾಹೀರಾಗಿದೆ .

ಹರಪನಹಳ್ಳಿ ಕ್ಷೇತ್ರದ ಗೊಂದಲ ರಾಜಕಾರಣ ತಣ್ಣಗೆ ಮಾಡಬೇಕಾದ ಪರಮೇಶ್ವರನಾಯ್ಕ ಅವರೇ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳ ಮಾಡುತ್ತಿದ್ದಾರೆ. ಉದಾಹರಣೆಗೆ ಚಂದ್ರಶೇಖರಭಟ್, ಶಶಿಧರ ಪೂಜಾರ್, ಹೆಚ್.ಬಿ.ಪರುಶುರಾಮಪ್ಪ, ಎಂ.ಟಿ.ಯಶವಂತಗೌಡ ಅವರುಗಳಿಗೆ ನಿಮಗೆ ಟಿಕೆಟ್ ಕೊಡಿಸುತ್ತೇನೆಂದು ಮೂಗಿಗೆ ತುಪ್ಪ ಹಚ್ಚುವ ಕೆಲಸವನ್ನು ಪರಮೇಶ್ವರನಾಯ್ಕ ಮಾಡುತ್ತಿದ್ದಾರೆ. ಜೊತೆಗೆ ಪಕ್ಷದಲ್ಲಿ ಗೊಂದಲ ಸೃಷ್ಠಿಸಿ ಹರಪನಹಳ್ಳಿ ಕ್ಷೇತ್ರಕ್ಕೆ ನಾನು ಅನಿವಾರ್ಯ ಎಂಬುವಂತೆ ಪರಮೇಶ್ವರನಾಯ್ಕ ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬುವುದು ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರ ಅಭಿಪ್ರಾಯವಾಗಿದೆ. ಒಟ್ಟಿನಲ್ಲಿ ಪರಮೇಶ್ವರನಾಯ್ಕ ಹರಪನಹಳ್ಳಿ ಕ್ಷೇತ್ರದ ರಾಜಕಾರಣದಿಂದ ಅಂತರಕಾಯ್ದುಕೊಳ್ಳುವವವರೆಗೂ ಇಲ್ಲಿಯ ಸಮಸ್ಯೆಗೆ ಅಂತ್ಯ ಹಾಡಲು ಸಾಧ್ಯವಿಲ್ಲ ಎಂಬುವುದಂತೂ ಸತ್ಯ.

Leave a Reply

Your email address will not be published. Required fields are marked *