Vijayanagara Express

Kannada News Portal

ಪುರಸಭೆ ವ್ಯಾಪ್ತಿಯ ಪಾರ್ಕ್ ಉದ್ಘಾಟನೆ ಗೊಂದಲ | ಉದ್ಘಾಟನೆಗೆ ಆಗಮಿಸಿದ್ದ ಶಾಸಕರಿಗೆ ಮುಜುಗರ

1 min read

ಪುರಸಭೆ ವ್ಯಾಪ್ತಿಯ ಪಾರ್ಕ್ ಉದ್ಘಾಟನೆ ಗೊಂದಲ | ಉದ್ಘಾಟನೆಗೆ ಆಗಮಿಸಿದ್ದ ಶಾಸಕರಿಗೆ ಮುಜುಗರ!

ಹರಪನಹಳ್ಳಿ: ಸ್ಥಳೀಯ ಪುರಸಭೆಯ ಬಿಜೆಪಿಯ ಸದಸ್ಯರಿಬ್ಬರ ನಡುವೆ ಪಾರ್ಕ್ ವಿಷಯದಲ್ಲಿ ಗೊಂದಲ ಉಂಟಾದ ಪರಿಣಾಮ ಪಾರ್ಕ್ ಉದ್ಘಾಟನೆ ಮುಂದೂಡಿದ ಘಟನೆ ಹರಪನಹಳ್ಳಿ ಪಟ್ಟಣದಲ್ಲಿ ನಡೆದಿದೆ.
ಹರಪನಹಳ್ಳಿ ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ಅಪ್ಪಣ್ಣೇಶ್ವರ ದೇವಸ್ಥಾನದ ಹತ್ತಿರವಿರುವ ಪಾರ್ಕ್‌ನ್ನು ಶನಿವಾರ ಕ್ಷೇತ್ರದ ಶಾಸಕ ಜಿ.ಕರುಣಾಕರರೆಡ್ಡಿ ಅವರು ಉದ್ಘಾಟಿಸಬೇಕಿತ್ತು. ಅದರಂತೆ ಶನಿವಾರ ಬೆಳಿಗ್ಗೆ 11 ಗಂಟೆಗೆ ಸಮಯ ನಿಗದಿಯಾಗಿತ್ತು. ಆದರೆ ಒಬ್ಬ ಸದಸ್ಯರು ನಮ್ಮ ವ್ಯಾಪ್ತಿಗೆ ಪಾರ್ಕ್ ಬರುತ್ತದೆ ಎಂದು ಹೇಳಿದ್ದರಿಂದ ಗೊಂದಲ ಗೂಡಾಗಿ ಪಾರ್ಕ್ ಉದ್ಘಾಟನೆ ನಡೆಯಲಿಲ್ಲ.
ಇದಕ್ಕೂ ಮೊದಲು 78.75ಲಕ್ಷರೂ ವೆಚ್ಚದಲ್ಲಿ ಹೊಂಬಳಗಟ್ಟಿ ರಸ್ತೆಯಲ್ಲಿರುವ ಘನತಾಜ್ಯ ಘಟಕದವರೆಗೆ ಹೋಗುವ ರಸ್ತೆಗೆ ಡಾಂಬಾರೀಕರಣ ಹಾಗೂ 25 ಲಕ್ಷರೂ ವೆಚ್ಚದಲ್ಲಿ ಪಟ್ಟಣದ ಗೋಸಾಯಿ ಗುಡ್ಡದ ಹತ್ತಿರವಿರುವ ಟ್ಯಾಂಕ್ ಮತ್ತು ಬೋರವೆಲ್ ದುರಸ್ತಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುರಸಭೆಯ ೪ನೇ ವಾರ್ಡ್ ಸದಸ್ಯ ಕಿರಣ್ ಶಾನಬೋಗ್ ಹಾಗೂ 5ನೇ ವಾರ್ಡ್ ಸದಸ್ಯ ಹರಾಳು ಹೆಚ್.ಎಂ.ಅಶೋಕ್ ಅವರು ಅಪ್ಪಣೇಶ್ವರ ದೇವಸ್ಥಾನ ಹತ್ತಿರವಿರುವ ಪಾರ್ಕ್ ನಮ್ಮ ವ್ಯಾಪ್ತಿಗೆ ಬರುತ್ತದೆ ಎಂದು ಇಬ್ಬರೂ ಸದಸ್ಯರು ಹೇಳಿದ್ದರಿಂದ ಶಾಸಕರು ಪ್ರವಾಸಿ ಮಂದಿರ ವೃತ್ತದಿಂದ ಕಚೇರಿಗೆ ತೆರಳಿದರು.

ಇಬ್ಬರೂ ಸದಸ್ಯರು ಹಾಗೂ ಶಾಸಕರ ಜೊತೆಗೆ ಅವರ ಕಚೇರಿಯಲ್ಲಿ ಸಭೆ ನಡೆಯುತ್ತಿತ್ತು. ಮತ್ತೊಂದೆಡೆ ಪಾರ್ಕ್‌ನಲ್ಲಿ ಉದ್ಘಾಟನೆಗೆ ಬೋರ್ಡ್‌ಗೆ ಪರದೆ ಹಾಕಿ ಗುತ್ತಗೆದಾರರು ಮತ್ತು ಪೂಜೆಗೆ ಸಿದ್ದತೆ ಮಾಡಿಕೊಂಡಿದ್ದ ಅರ್ಚಕರು ಮತ್ತು ಅಧಿಕಾರಿಗಳು, ಸಿಬ್ಬಂದಿಗಳು ಕಾಯುತ್ತಿದ್ದರು. ಶಾಸಕರ ಕಚೇರಿಯಲ್ಲಿ ಸುಮಾರು 1 ತಾಸು ಚರ್ಚೆ ನಡೆಯಿತು. ಆದರೆ ಅಂತಿಮವಾಗಿ ಯಾವ ಸದಸ್ಯರ ವ್ಯಾಪ್ತಿಗೆ ಪಾರ್ಕ್ ಬರುತ್ತದೆ ಎನ್ನುವುದು ನಿರ್ಧಾರವಾಗದ ಹಿನ್ನಲೆಯಲ್ಲಿ ಪಾರ್ಕ್ ಉದ್ಘಾಟನೆ ಮುಂದೂಡಲಾಯಿತು. ಇಬ್ಬರು ಸದಸ್ಯರು ಕುಳಿತು ಸಮಸ್ಯೆಯನ್ನು ಬಗೆಹರಿಸಿಕೊಂಡು ಬಂದ ನಂತರ ನಾನು ಉದ್ಘಾಟನೆಗೆ ಬರುತ್ತೇನೆ ಎಂದು ಶಾಸಕ ಗಾಲಿ ಕರುಣಾಕರರೆಡ್ಡಿ ಸದಸ್ಯರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಹೊಸಪೇಟೆ ರಸ್ತೆಯ ಅಪ್ಪಣ್ಣೇಶ್ವರ ಪಾರ್ಕ್ ಹಾಗೂ ಟೀಚರ್ ಕಾಲೋನಿಯ ಪಾರ್ಕ್ 5ನೇ ವಾರ್ಡ್‌ಗೆ ಸೇರುತ್ತವೆ. ಆದರೆ ಸದಸ್ಯ ಕಿರಣ್ ಶಾನಬೋಗ್ ಅವರು 4ನೇ ವಾರ್ಡ್‌ಗೆ ಸೇರಿದೆ ಎನ್ನುತ್ತಿದ್ದಾರೆ. ಇಲ್ಲಿಯ ಜನರು ನನಗೆ ಮತ ಹಾಕಿದ್ದಾರೆ, ಬೀದಿ ದೀಪ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೂ ದಿನ ಬೆಳಗಾದರೆ ಸಾಕು ನನಗೆ ಪೋನ್ ಮಾಡುತ್ತಾರೆಯೇ ಹೊರತು ಕಿರಣ್ ಅವರಿಗೆ ಅಲ್ಲ, ಯಾವುದೋ ಮ್ಯಾಪ್ ಹಿಡಿದುಕೊಂಡು ಬಂದು ನಮ್ಮ ವ್ಯಾಪ್ತಿಗೆ ಬರುತ್ತದೆ ಎನ್ನುತ್ತಿದ್ದಾರೆ , ಹರಪನಹಳ್ಳಿಯ ಒಟ್ಟು 27 ವಾರ್ಡ್‌ಗಳ ಪೈಕಿ ಅತಿ ಹೆಚ್ಚು ಮತದಾರರನ್ನು ಹೊಂದಿರುವ 5ನೇ ವಾರ್ಡ್ ನನ್ನದಾಗಿದೆ ಎಂದು 5ನೇ ವಾರ್ಡ್‌ನ ಪುರಸಭೆ ಸದಸ್ಯ ಹರಾಳು ಹೆಚ್.ಎಂ.ಅಶೋಕ್ ತಿಳಿಸಿದ್ದಾರೆ.
ಪಾರ್ಕ್‌ನ ಗೇಟ್ ಮತ್ತು ಕಲ್ಲುಗಳಿಗೆ ಸುಣ್ಣ-ಬಣ್ಣ ಬಳಿದು, ಗೇಟ್ ದುರಸ್ತಿ ಮಾಡಿದ ಮೇಲೆ ಉದ್ಘಾಟಿಸಬೇಕು. ಕೆಲಸ ಅಪೂರ್ಣವಾಗಿರುವ ವೇಳೆ ತಾರತುರಿಯಲ್ಲಿ ಪಾರ್ಕ್ ಉದ್ಘಾಟಿಸುವುದು ಬೇಡ, ಕೆಲಸ ಪೂರ್ಣಗೊಂಡ ನಂತರವೇ ಉದ್ಘಾಟನೆ ಮಾಡಬೇಕು. ಜೊತೆಗೆ ಪಾರ್ಕ್‌ನಲ್ಲಿ ಹಾಕಿರುವ ಉದ್ಘಾಟನಾ ನಾಮಫಲಕ ಬದಲಿಸಿ ನನ್ನ ಹೆಸರು ಹಾಕಬೇಕು ಎಂದು ಪುರಸಭೆ ಸದಸ್ಯ ಹರಾಳು ಹೆಚ್.ಎಂ.ಅಶೋಕ್ ಅವರು ಪುರಸಭೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಅಪ್ಪಣೇಶ್ವರ ದೇವಸ್ಥಾನ ಹತ್ತಿರವಿರುವ ಪಾರ್ಕ್ ಬಳಿಯ ಜನರು ಸದಸ್ಯ ಹೆಚ್.ಎಂ.ಅಶೋಕ್ ಅವರಿಗೆ ಮತ ಹಾಕಿರಬಹುದು, ನನಗೂ ಮತ ಹಾಕಿದ್ದಾರೆ. ಆದರೆ ಪಾರ್ಕ್ ಮ್ಯಾಪ್ ಪ್ರಕಾರ ನನ್ನ ವಾರ್ಡ್ ವ್ಯಾಪ್ತಿಗೆ ಬರುತ್ತದೆ. ಬಾಡಿಗೆ ಮನೆಯಲ್ಲಿರುವ ಮತದಾರರು ಪಟ್ಟಣದ ಕೆಲವೆಡೆ ಹೋಗಿರುತ್ತಾರೆ, ಹಾಗೆಂದ ಮಾತ್ರಕ್ಕೆ ಅವರು ಹೋಗಿ ವಾಸವಿರುವ ವಾರ್ಡ್ ನನಗೆ ಸೇರುವುದಿಲ್ಲ. ಸದಸ್ಯ ಅಶೋಕ್ ಅವರಿಗೆ ಗೊಂದಲವಾಗಿದೆ. ಆದರೆ ಅಂತಿಮವಾಗಿ ಶಾಸಕರ ಮಾರ್ಗದರ್ಶನದಂತೆ ನಾನು ನಡೆದುಕೊಳ್ಳುತ್ತೇನೆ ಎಂದು 4ನೇ ವಾರ್ಡ್ ಸದಸ್ಯ ಕಿರಣ್ ಶಾನಬೋಗ್ ತಿಳಿಸುತ್ತಾರೆ.
ಈ ಕುರಿತು ಪ್ರತಿಕ್ರಿಯೆ ನೀಡಲು ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ಅವರು ನಿರಾಕರಿಸಿದರು. ಒಟ್ಟಿನಲ್ಲಿ ಹರಪನಹಳ್ಳಿ ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ಅಪ್ಪಣೇಶ್ವರ ದೇವಸ್ಥಾನ ಹತ್ತಿರವಿರುವ ಪಾರ್ಕ್ ಸಮಸ್ಯೆ ಗೊಂದಲ ಗೂಡಾಗಿದೆ. ಬಿಜೆಪಿ ಸದಸ್ಯರ ನಡವಳಿಕೆಯಿಂದ ಉದ್ಘಾಟನೆಗೆ ಆಗಮಿಸಿದ್ದ ಶಾಸಕ ಜಿ.ಕರುಣಾಕರರೆಡ್ಡಿ ಅವರಿಗೆ ಮುಜುಗರ ಉಂಟಾಗಿರುವುದಂತೂ ದಿಟ.

Leave a Reply

Your email address will not be published. Required fields are marked *