ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ -ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಪಿ ಶ್ರವಣ್ .
1 min readಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ -ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಪಿ ಶ್ರವಣ್ .
ಹರಪನಹಳ್ಳಿ: ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಯಾವಾಗ ಕೇಸ್‌ಗಳು ಹೆಚ್ಚಾಗುತ್ತವೆಯೋ ಗೊತ್ತಿಲ್ಲ. ಹೀಗಾಗಿ ಔಷಧ ಹಾಗೂ ಸಮರ್ಪಕ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಲಾಗುವುದು ಎಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ದ ಪಿ.ಶ್ರವಣ್ ತಿಳಿಸಿದರು.
ಹರಪನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯನಗರ ಜಿಲ್ಲೆಯಲ್ಲಿ ಕೊರೊನಾ ೩ನೇ ಅಲೆಯ ರೂಪಾಂತರಿ ಒಮಿಕ್ರಾನ್ ಇನ್ನೂ ಆರಂಭವಾಗಿಲ್ಲ. ಬುಧವಾರ ಬಳ್ಳಾರಿಯಲ್ಲಿ 16 ಕೇಸ್, ಕಳೆದ ನಾಲ್ಕೈದು ದಿನಗಳ ಹಿಂದೆ ಸಂಡೂರು ತಾಲೂಕಿನ ಒಂದು ಸಂಸ್ಥೆಯಲ್ಲಿ 14 ಕೇಸ್‌ಗಳು ಪತ್ತೆಯಾಗಿವೆ. ಆದರೆ ಇಲ್ಲಿಯವರೆಗೂ ಯಾವುದೇ ದೊಡ್ಡ ಸಂಖ್ಯೆಯಲ್ಲಿ ಕೊರೊನಾ ಕೇಸ್‌ಗಳು ಪತ್ತೆಯಾಗಿಲ್ಲ. ಪ್ರತಿ ತಾಲೂಕು ಕೇಂದ್ರಗಳಲ್ಲಿ ಪ್ರತಿ ದಿನ 200 ಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಈಗಾಗಲೇ ವೈದ್ಯರು ಹಾಗೂ ಔಷಧವನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿಗಳಲ್ಲಿರುವ ಸಮಸ್ಯೆಗಳು ಹಾಗೂ ಸಿದ್ದತೆಗಳ ಕುರಿತು ಸಭೆ ನಡೆಸುತ್ತಿದ್ದೇನೆ. ಹಗರಿಬೊಮ್ಮಹಳ್ಳಿ ಹಾಗೂ ಹೂವಿನಹಡಗಲಿ ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಭೆ ನಡೆಸಲಾಗಿದೆ. ಆಕ್ಸಿಜನ್ ಸಿಲಿಂಡರ್ ಇರುವಷ್ಟು ಬೆಡ್‌ಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಕೋವಿಡ್ ಕೇರ್ ಸೆಂಟರ್‌ಗಳನ್ನು ಜಿಲ್ಲೆಯಲ್ಲಿ ಇನ್ನೂ ಎಲ್ಲಿಯೂ ತೆರೆದಿಲ್ಲ. ಆದರೆ ಸ್ಥಳೀಯ ಉಪವಿಭಾಗಧಿಕಾರಿಗಳು ಹಾಗೂ ತಹಶೀಲ್ದಾರ ಅವರಗಳು ಆಯಾ ತಾಲೂಕು ಕೇಂದ್ರಗಳಲ್ಲಿ ಜಾಗವನ್ನು ಆಯ್ಕೆ ಮಾಡಿದ್ದಾರೆ. ಅಲ್ಲಿ ಇನ್ನೂ ಏನೂ ವ್ಯವಸ್ಥೆ ಮಾಡಿಕೊಂಡಿಲ್ಲ ಎಂದು ಮಾಹಿತಿ ನೀಡಿದರು.
ಕೊರೊನಾ ನಿಯಂತ್ರಣ ಸಲುವಾಗಿ ತಜ್ಞ ವೈದ್ಯರನ್ನು ಸರ್ಕಾರ ನೇಮಕ ಮಾಡಿಕೊಂಡಿದೆ. ಅವರು ಜಿಲ್ಲೆಗೆ ಆಗಮಿಸುವ ನಿರೀಕ್ಷೆಯಲ್ಲಿದ್ದೇವೆ. ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸದ್ಯ 80 ಆಕ್ಸಿಜನ್ ಬೆಡ್‌ಗಳಿವೆ. ಸ್ಥಳ, ಆಕ್ಸಿಜನ್ ಮತ್ತು ಅವಶ್ಯಕತೆ ಅಧಾರದಲ್ಲಿ ಇನ್ನೂ 30 ರಿಂದ 40 ಬೆಡ್‌ಗಳನ್ನು ಹೆಚ್ಚುವರಿಯಾಗಿ ಬೆಡ್‌ಗಳನ್ನು ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದ ಅವರು, ವೈದ್ಯರ ಕೊರತೆ ಇರುವ ಆಸ್ಪತ್ರೆಗಳಲ್ಲಿ ಎಂಬಿಎಸ್ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಜಿಲ್ಲಾ ಪಂಚಾಯ್ತಿವತಿಯಿಂದ ನೇಮಕ ಮಾಡಿಕೊಳ್ಳಬಹುದಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಲು ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದರು.
ವಿಕೆಂಡ್ ಕರ್ಫ್ಯೂ ಕಡ್ಡಾಯವಾಗಿ ಎಲ್ಲರೂ ಪಾಲನೆ ಮಾಡಬೇಕು. ಏಕೆಂದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರಗೆ ಸುತ್ತಾಡದಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಆಸ್ಪತ್ರೆಗಳಿಗೆ ತೆರಲು ಯಾವುದೇ ನಿರ್ಭಂಧವಿಲ್ಲ. ಶಾಲಾ, ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ನಿರ್ಭಂಧ ವಿಧಿಸಲಾಗಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಚಿಕಿತ್ಸೆಗಾಗಿ ಅಂತರ ಜಿಲ್ಲೆಗಳಿಗೆ ತರಲು ಯಾವುದೇ ತರಹದ ಪಾಸ್ ಕೊಡುವ ವ್ಯವಸ್ಥೆ ಇಲ್ಲ. ಮದುವೆ ಸಮಾರಂಭಗಳಿಗೆ ಮಾತ್ರ 100 ಜನರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ರಾಜ್ಯ ಮಟ್ಟದ ಎಲ್ಲ ನಿರ್ಭಂದಗಳು ಅನ್ವಯವಾಗುತ್ತಿವೆ ಎಂದು ಹೇಳಿದರು.
ಹರಪನಹಳ್ಳಿ ಪಟ್ಟಣದಲ್ಲಿ ಹಂದಿಗಳ ಹಾವಳಿ ನಿಯಂತ್ರಿಸುವಂತೆ ಹೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಪ್ರಾಣಿಗಳ ಸಂಘ ಇರುತ್ತದೆ ಹಾಗೂ ಜಿಲ್ಲೆಯ ಎಲ್ಲಾ ಪಶು ವೈದ್ಯಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಚಂದ್ರಶೇಖರಯ್ಯ, ತಹಶೀಲ್ದಾರ್ ಎಲ್.ನಂದೀಶ್, ತಾಲೂಕು ಆರೋಗ್ಯಾಧಿಕಾರಿ , ಪುರಸಭೆ ಮುಖ್ಯಾಧಿಕಾರಿ ಯರಗುಡಿ.ಶಿವಕುಮಾರ, ಡಾ.ಹಾಲಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.