Vijayanagara Express

Kannada News Portal

ಹರಪನಹಳ್ಳಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ನೋಂದಣಿ ಆರೋಪ; ಪತ್ರಬರಹಗಾರನ ಪರವಾನಿಗೆ ರದ್ದುಪಡಿಸಲು ಆಗ್ರಹ

1 min read

ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ನೋಂದಣಿ ಆರೋಪ; ಪತ್ರಬರಹಗಾರನ ಪರವಾನಿಗೆ ರದ್ದುಪಡಿಸಲು ಆಗ್ರಹ

ಹರಪನಹಳ್ಳಿ:ಮರಣ ಹೊಂದಿರುವ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಜಮೀನನ್ನು ಬೇರೊಬ್ಬ ವ್ಯಕ್ತಿಗೆ ದಾನಪತ್ರ ನೋಂದಣಿ ಮಾಡಿಸಿ, ಆಸ್ತಿ ಲಪಟಾಯಿಸಲು ಸಹಕರಿಸಿದ ಜಿಲ್ಲಾ ಪರವಾನಿಗೆ ಪತ್ರ ಬರಹಗಾರ ಡೆಂಕಿ ಇಮ್ರಾನ್ ಬಾಷಾ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಪರವಾನಿಗೆ ರದ್ದುಪಡಿಸುವಂತೆ ಒತ್ತಾಯಿಸಿ, ಕರ್ನಾಟಕ ರೈತ ಮಿತ್ರ ಸಂಘದ(ಕೆಆರ್‌ಎಎಸ್) ಸಂಘಟನೆಯ ಕಾರ್ಯಕರ್ತರು ಶುಕ್ರವಾರ ಪಟ್ಟಣದ ಉಪನೋಂದಣಿ ಕಚೇರಿ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವವಹಿಸಿದ್ದ ಸಂಘಟನೆಯ ರಾಜ್ಯಘಟಕದ ಅಧ್ಯಕ್ಷ ಎಚ್. ವೆಂಕಟೇಶ್ ಮಾತನಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಆಸ್ತಿಗಳ ದಸ್ತಾವೇಜುಗಳನ್ನು ನೋಂದಣಿ ಮಾಡಿಸಿ, ಅಮಾಯಕ, ಅನಕ್ಷರಸ್ಥ ಹಾಗೂ ಅಸಹಾಯಕರ ಆಸ್ತಿಗಳನ್ನು ಲಪಟಾಯಿಸುವ ಜಾಲ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ,
ನಕಲಿ ದಾಖಲೆಗಳನ್ನು ಸೃಷ್ಟಿಸಿ, ಯಾರದೋ ಹೆಸರಿನ ಆಸ್ತಿಯನ್ನು ಇನ್ನಾರಿಗೋ ನೋಂದಣಿ ಮಾಡಿಸುವ ಮೂಲಕ ಅಮಾಯಕ ರೈತಾಪಿ ಕುಟುಂಬಗಳನ್ನು ಬೀದಿಗೆ ತಳ್ಳುವ ಕಾರ್ಯ ನಡೆಯುತ್ತಿದೆ ಎಂದು ಕಿಡಿಕಾರಿದರು.

ಪಟ್ಟಣದ ಬಾಣಗೇರಿ ನಿವಾಸಿ ಕಟ್ಟಿ ಖಾಸೀಂಸಾಬ್ ತಂದೆ ಬಾರಸಾಬ್ ಇವರು ಹರಪನಹಳ್ಳಿ ಕಂದಾಯ ಗ್ರಾಮಕ್ಕೆ ಸೇರಿದ ಸರ್ವೇ ನಂಬರ್ 166/ಎ ಪೈಕಿ 7 ಸೆಂಟ್ಸ್ ಜಮೀನನ್ನು 1945 ರಲ್ಲಿ ಖರೀದಿಸಿದ್ದು, 1966 ರವರೆಗೂ ಪೈಸಲ್ ದಾಖಲೆಗಳಲ್ಲಿ ಹಾಗೂ 1968 ರಿಂದ 2000 ನೇ ಇಸ್ವಿಯವಗೂ ಕೈಬರಹ ಪಹಣಿ ಪತ್ರಿಕೆ(ಆರ್‌ಟಿಸಿ) ಹಾಗೂ 2000-2022ರವರೆಗೂ ಗಣಕೀಕೃತ ಪಹಣಿ ಕಟ್ಟಿ ಖಾಸೀಂಸಾಬ್ ಇವರ ಹೆಸರಿನಲ್ಲಿ ಚಾಲ್ತಿಯಲ್ಲಿವೆ.
ಆದರೆ, ಕಟ್ಟಿ ಖಾಸೀಂಸಾಬ್ 1945ರಲ್ಲಿ ಮರಣ ಹೊಂದಿದ್ದು, ಮೃತ ಖಾಸೀಂಸಾಬ್ ಅವರಿಗೆ ಇಬ್ಬರು ಪತ್ನಿಯರು ಇದ್ದು, ಮೊದಲ ಪತ್ನಿಗೆ ಮೂವರು ಮಕ್ಕಳಿರುತ್ತವೆ ಹಾಗೂ, ಎರಡನೇ ಪತ್ನಿಗೆ ಆರು ಜನ ಮಕ್ಕಳಿದ್ದಾರೆ.

ಈ ಪೈಕಿ, ಎರಡನೇ ಪತ್ನಿಯ ಕೊನೆಯ ಪುತ್ರ ಕಟ್ಟಿ ಮಹಮ್ಮದ್ ಸಾಬ್ ಹಾಗೂ ಈತನ ಪುತ್ರರಾದ ಕಟ್ಟಿ ವಲಿ ಹಾಗೂ ಕಟ್ಟಿ ಖಾಸೀಂಸಾಬ್(ತಾತನ ಹೆಸರು ನಾಮಕರಣ ಮಾಡಲಾಗಿದೆ) ಎಂಬುವವರು ಆಸ್ತಿಯನ್ನು ಲಪಟಾಯಿಸುವ ಹಿನ್ನೆಲೆಯಲ್ಲಿ ಮಹಮ್ಮದ್ ಸಾಬ್ ಇವರ ಪುತ್ರ ಖಾಸೀಂಸಾಬ್(ಮೊಮ್ಮಗ) ಎಂಬಾತ, ತನ್ನ ಅಜ್ಜನ ಹೆಸರಿನ ಆಸ್ತಿಯನ್ನು ತನ್ನ ಸಹೋದರ ವಲಿಸಾಬ್ ಈತನಿಗೆ ದಾನಪತ್ರ ನೋಂದಣಿ ಮಾಡಿಸಿದ್ದಾನೆ. ಪಹಣಿ ಪತ್ರದಲ್ಲಿಯೂ ಖಾಸೀಂಸಾಬ್ ಎಂಬ ಹೆಸರು ಇರುವುದನ್ನೇ ದುರ್ಬಳಕೆ ಮಾಡಿಕೊಂಡು, ದಾನಪತ್ರ ನೋಂದಣಿ ಮಾಡಿಸಿರುವ ಕಟ್ಟಿ ಖಾಸೀಂಸಾಬ್ ತಂದೆ ಮಹಮ್ಮದ್ ಸಾಬ್ ಹಾಗೂ ದಾನ ಪಡೆದಿರುವ ವಲೀಸಾಬ್ ತಂದೆ ಮಹಮ್ಮದ್‌ಸಾಬ್ ಹಾಗೂ ಭೂಮಿಯ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸದೆ, ದಾನಪತ್ರದ ದಸ್ತಾವೇಜು ತಯಾರಿಸಿದ ಜಿಲ್ಲಾ ಪರವಾನಿಗೆ ಪತ್ರ ಬರಹಗಾರ ಡಂಕಿ ಇಮ್ರಾನ್‌ಬಾಷಾ ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಪತ್ರ ಬರಹಗಾರರ ಪರವಾನಿಗೆ ರದ್ದುಪಡಿಸುವಂತೆ ಆಗ್ರಹಿಸಿದರು.

ಈ ಕುರಿತು ಉಪ ನೋಂದಾವಣಾಧಿಕಾರಿ ಅವರ ಗಮನಕ್ಕೆ ತಂದರೆ, ಈ ಬಗ್ಗೆ ನಿಮ್ಮ ತಕರಾರು ಇದ್ದರೆ, ನ್ಯಾಯಾಲಯಕ್ಕೆ ಹೋಗಿ ಎಂದು ಬೇಜವಾಬ್ದಾರಿಯ ಉಡಾಫೆ ಉತ್ತರವನ್ನು ನೀಡುತ್ತಾರೆ.

ಅಮಾಯಕರು, ಅಸಹಾಯಕರು ಕೋರ್ಟ್ಗೆ ಅಲೆದಾಡಲು ಸಾಧ್ಯವೇ? ದಾಖಲೆಗಳಲ್ಲಿನ ದೋಷದಿಂದಾಗಿ ನೋಂದಣಿ ಆಗಿದ್ದರೆ ನಮ್ಮ ತಕರಾರು ಇಲ್ಲ, ಅದನ್ನು ಕೋರ್ಟ್ಗಳಲ್ಲಿಯೇ ಪರಿಹರಿಸಿಕೊಳ್ಳುತ್ತಿದ್ದೇವು. ಆದರೆ, ಯಾರದೋ ಆಸ್ತಿಯನ್ನು ಇನ್ನಾರಿಗೋ ನೋಂದಣಿ ಮಾಡುವ ಪ್ರಕ್ರಿಯೆ ಶುದ್ಧ ವಂಚನೆಯಿಂದಾಗಿ ರುತ್ತದೆ ಹೀಗಾಗಿ, ಈ ಕೂಡಲೇ ನೋಂದಣಿಯಾಗಿ, ಖಾತಾ ಬದಲಾವಣೆ ಹಂತದಲ್ಲಿರುವ ಪ್ರಕರಣವನ್ನು ತಡೆಹಿಡಿದು ತನಿಖೆ ನಡೆಸಬೇಕು .
ಅಲ್ಲದೇ ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ವೆಂಕಟೇಶ್ ಹೆಚ್ ಒತ್ತಾಯಿಸಿದರು.

ಸಂಘಟನೆಯ ಮುಖಂಡರಾದ ಮಾಡಲಗೇರಿ ಹಾಲಪ್ಪ, ರೇಣುಕಮ್ಮ, ಹೈದರ್‌ಅಲಿ, ಗಫಾರ್ ಸಾಬ್, ರಾಜು ಕಟ್ಟಿ, ಶಬ್ಬೀರ್, ಮಹಮ್ಮದ್ ರಫೀಕ್ ಹಾಗೂ ಷೇಕ್ಷಾವಲಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *