Vijayanagara Express

Kannada News Portal

ರಸ್ತೆ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ – ರೈತ ಮುಖಂಡ ಹೊಸಳ್ಳಿ ಮಲ್ಲೇಶ್ ಗಡುವು

1 min read

 

ರಸ್ತೆ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ – ರೈತ ಮುಖಂಡ ಹೊಸಳ್ಳಿ ಮಲ್ಲೇಶ್ ಗಡುವು

 

ಹರಪನಹಳ್ಳಿ :ರಸ್ತೆ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದು ರೈತ ಮುಖಂಡ ಹೊಸಳ್ಳಿ ಮಲ್ಲೇಶ್ ರವರು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು .

ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಹೊಸಪೇಟೆ ಶಿವಮೊಗ್ಗ ರಾಜ್ಯ ಹೆದ್ದಾರಿಯ ರಸ್ತೆ ತಡೆಯನ್ನು ನಡೆಸಿ ರಸ್ತೆ ದುಸ್ಥಿತಿಗೆ ಕಾರಣ ತಾಲೂಕಿನ ಶಾಸಕರ ನಿರ್ಲಕ್ಷವೇ ಇದಕ್ಕೆ ಪ್ರಮುಖ ಕಾರಣ ಎಂದು ಆರೋಪ ಮಾಡಿದರು.

ರಸ್ತೆ ತಡೆ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪಟ್ಟಣದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದರೂ ಕಣ್ಣಿಗೆ ಕಾಣದಂತೆ ವರ್ತಿಸುವ ಹಾಗೂ ವಾಹನ ಸವಾರರ ಬೆನ್ನು ಮೂಳೆಗಳು ಮುರಿಯಲು ಶಾಸಕರು ಮತ್ತು ಅಧಿಕಾರಿಗಳೇ ನೇರ ಹೊಣೆ ಎಂದು ಶಾಸಕರ ವಿರುದ್ಧ ಕಿಡಿಕಾರಿದರು.

ಹರಪನಹಳ್ಳಿ ತಾಲೂಕು ಭೌಗೋಳಿಕವಾಗಿ ದೊಡ್ಡದಾದ ತಾಲೂಕು ಆಗಿದೆ ಸುಮಾರು 186 ಹಳ್ಳಿಗಳನ್ನು ಒಳಗೊಂಡಿರುವ ಈ ತಾಲೂಕು ಪ್ರತಿನಿತ್ಯವೂ ಹಳ್ಳಿಗಳಿಂದ ಪಟ್ಟಣದ ಕಡೆಗೆ ಸಾವಿರಾರು ಜನರು ವಿವಿಧ ಉದ್ದೇಶಗಳಿಗಾಗಿ ಬರುತ್ತಾರೆ ಅಲ್ಲದೆ ರಾಜ್ಯ ಹೆದ್ದಾರಿ ಹೊಸಪೇಟೆ ಶಿವಮೊಗ್ಗ ಮುಖ್ಯರಸ್ತೆಯು ಪಟ್ಟಣದಲ್ಲಿ ಹಾದು ಹೋಗಿರುವುದರಿಂದ ಇನ್ನಷ್ಟು ವಾಹನಗಳ ಸಂದಣಿಯಾಗುತ್ತಿದೆ ಹಾಗಾಗಿ ಇಷ್ಟೊಂದು ಜನಸಂದಣಿ ಇರುವ ಈ ಪಟ್ಟಣದಲ್ಲಿ ರಸ್ತೆಗಳು ನರಕ ಸಾದೃಶವಾಗಿವೆ ಎಂದರಲ್ಲದೆ ಕೂಡಲೆ ರಸ್ತೆಗಳನ್ನು ದುರಸ್ತಿ ಕಾರ್ಯ ಕೈಗೆತ್ತಿಗೊಳ್ಳದೆ ಹೊದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಬೇರೆ ತಾಲೂಕುಗಳಿಂದ ಹರಪನಹಳ್ಳಿ ತಾಲೂಕಿಗೆ ಬರುವ ಜನರು ಇಲ್ಲಿನ ರಸ್ತೆಗಳ ಸ್ಥಿತಿಯನ್ನು ನೋಡಿ ಅಧಿಕಾರಿಗಳಿಗೆ ಮತ್ತು ಶಾಸಕರಿಗೆ ಇಡಿ ಶಾಪ ಹಾಕುತ್ತಿದ್ದಾರೆ ಪ್ರತಿನಿತ್ಯವೂ ಪಟ್ಟಣದಲ್ಲಿ ಅನೇಕ ಅಪಘಾತಗಳು ಸಂಭವಿಸಿ ಅಂಗವಿಕಲರಾಗಿ ಬಾಳಬೇಕಾದಂತ ಪರಿಸ್ಥಿತಿಯು ರಸ್ತೆಗಳಿಂದ ಉಂಟಾಗಿದೆ ಎಂದರು.

ರೈತ ಮುಖಂಡ ಸಿದ್ದಣ್ಣ ರವರು ಮಾತನಾಡಿ ಜನರಿಂದ ಪೆಟ್ರೋಲ್ ,ಡೀಸೆಲ್, ಸೇವಾ ಶುಲ್ಕ ಜಿಎಸ್‌ಟಿ ತೆರಿಗೆ ಮುಂತಾದವುಗಳಿಂದ ತೆರಿಗೆ ಹಣವು ಸಂಗ್ರಹವಾಗುತ್ತಿದ್ದರೂ ಈ ಹಣವನ್ನು ಅಭಿವೃದ್ಧಿಗೆ ಬಳಸದೆ ಜನಪ್ರತಿನಿಧಿಗಳು ತಮ್ಮ ಜೇಬಿಗೆ ಇಳಿಸುತ್ತಿದ್ದಾರೆ ಎಂದು ಆರೋಪಿಸಿದರು

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿ ಸರ್ಕಾರದಿಂದ ಮಂಜೂರಾದ ಕಾಮಗಾರಿಗಳಿಗೆ ಶೇಕಡ 40 ರಿಂದ 50 ರಷ್ಟು ಕಮಿಷನ್ ನ್ನನ್ನು ಹೊಡೆದು ರಾಜ ಮಹಾರಾಜರಂತೆ ಮೆರೆಯುತ್ತಿದ್ದಾರೆ ಎಂದರು.

ಹರಪನಹಳ್ಳಿಯಲ್ಲಿ ಯಾರು ಹೇಳುವವರು ಕೇಳುವವರು ಇಲ್ಲ ಎಂದುಕೊಂಡಂತಿದೆ ಹರಪನಹಳ್ಳಿಯು ಹೋರಾಟದ ನೆಲ ನಿಮ್ಮ ವಿಳಂಬ ನೀತಿ ಹಾಗೂ ಅಭಿವೃದ್ಧಿ ಬಗ್ಗೆ ನಿರ್ಲಕ್ಷ ಮಾಡುವುದನ್ನು ಇಂದು ಖಂಡಿಸಿ ರಸ್ತೆ ತಡೆದು ಹೋರಾಟದ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಕೂಡಲೇ ಎಚ್ಚೆತ್ತು ಪಟ್ಟಣದ ಮುಖ್ಯ ರಸ್ತೆಗಳನ್ನು ದುರಸ್ತಿ ಮಾಡಬೇಕು ಒಂದು ವೇಳೆ ರಸ್ತೆ ಮಾಡದೆ ಹೀಗೆ ನಿರ್ಲಕ್ಷ ಮುಂದುವರಿಸಿದರೆ ಹರಪನಹಳ್ಳಿ ತಾಲೂಕಿನ ಹೋರಾಟಗಾರರು ಶಾಂತಿಗೂ ಬದ್ಧ ಕ್ರಾಂತಿಗೂ ಸಿದ್ಧ ಎಂಬುದನ್ನು ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು ಅಲ್ಲದೆ ಮುಂದಿನ ದಿನಗಳಲ್ಲಿ ರಾಜಕಾರಣಿಗಳೇ ರಸ್ತೆ ಮಾಡಿ ಇಲ್ಲವೇ ಕುರ್ಚಿ ಕಾಲಿ ಮಾಡಿ ಎಂದು ಹೋರಾಟದ ಮೂಲಕ ಚಳುವಳಿ ಆರಂಭಿಸಬೇಕಾಗುತ್ತದೆ ಎಂದು ಜನಪ್ರತಿನಿಧಿಗಳನ್ನು ಎಚ್ಚರಿಸಿದರು.

ಹೋರಾಟಗಾರ ಗುಡಿಹಳ್ಳಿ ಹಾಲೇಶ್ ಮಾತನಾಡಿ
ತಾಲೂಕಿನಲ್ಲಿರುವ ಎಲ್ಲಾ ಗ್ರಾಮಗಳ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಹರಪನಹಳ್ಳಿ ದಾವಣಗೆರೆ ಮಾರ್ಗವಾಗಿ ರುವ ರಸ್ತೆಯನ್ನು ಕೂಡಲೇ ದುರಸ್ಥಿಯನ್ನು ಮಾಡಬೇಕು ಶಿವಮೊಗ್ಗ ಹೊಸಪೇಟೆ ಮುಖ್ಯ ರಾಜ್ಯ ಹೆದ್ದಾರಿಯನ್ನು ಕೂಡಲೇ ಕಾಮಗಾರಿ ಆರಂಭಿಸಬೇಕು ಅಲ್ಲದೇ ಕೊಟ್ಟೂರು ಹರಪನಹಳ್ಳಿ ಹೊಳಲು ರಸ್ತೆ,ಅರಸಿಕೆರೆ ಉಚ್ಚಂಗಿದುರ್ಗ ದಾವಣಗೆರೆ ಹೋಗುವ ರಸ್ತೆಯನ್ನು ಸಹ ಕೂಡಲೇ ದುರಸ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಕಲ್ಲಹಳ್ಳಿ ಗೋಣೆಪ್ಪ ,ಕರಿಯಜ್ಜ, ಅಭಿಷೇಕ್, ಎಸ್ ನಟರಾಜ್ ,ಬಳಿಗನೂರು ಕೊಟ್ರೇಶ್, ವಾಮನಾಯಕ್, ಎಂ ಸೆಫಿ ಕುಂಚುರು, ಕೆ ಪ್ರಕಾಶ್ ಕಲ್ಲಳ್ಳಿ, ಕೆ ಪ್ರಸನ್ನ ಚಾರಿ, ಪಿ ಮಂಜಪ್ಪ, ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *