ಗ್ರಾಮದ ಮನೆಗಳಿಗೆ ನುಗ್ಗಿದ ನೀರು, ನಿರ್ಲಕ್ಷ್ಯ ಮೆರೆದ ಅಧಿಕಾರಿಗಳು
1 min read
ಗ್ರಾಮದ ಮನೆಗಳಿಗೆ ನುಗ್ಗಿದ ನೀರು, ನಿರ್ಲಕ್ಷ್ಯ ಮೆರೆದ ಅಧಿಕಾರಿಗಳು
ಹರಪನಹಳ್ಳಿ: ತಾಲೂಕಿನ ಕಡತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದ್ಯಾಲ ಕ್ಯಾಂಪ್ ನಲ್ಲಿ ರಾಜ್ಯದ್ಯಾಂತ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಳೆ ನೀರು ಮನೆಗಳಿಗೆ ನುಗ್ಗಿ ಜನರ ಜೀವನ ಬೀದಿಗೆ ಬಂದರೂ ಅಧಿಕಾರಿಗಳು ಮಾತ್ರ ಗ್ರಾಮದ ಕಡೆ ಸುಳಿದಾಡದೆ ನಿರ್ಲಕ್ಷ್ಯ ವಹಿಸಿರುವ ಘಟನೆ ನಂದ್ಯಾಲ ಕ್ಯಾಂಪ್ ನಲ್ಲಿ ನಡೆದಿದೆ.
ರಾಜ್ಯದಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯು ತಾಲೂಕಿನಲ್ಲಿಯೂ ಸಹ ಅವಾಂತರ ಸೃಷ್ಟಿಸಿದೆ ತಾಲೂಕಿನ ಕಡತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದ್ಯಾಲ ಕ್ಯಾಂಪ್ ನಲ್ಲಿ ಮಳೆಗೆ 38 ಮನೆಗಳಲ್ಲಿ ನೀರು ನಿಂತು ಕೆರೆಯಂತಾಗಿದೆ ಇಲ್ಲಿಯ ಜನರ ಜೀವನ ಹಸ್ತವ್ಯಸ್ಥಗೊಂಡು ದೇವಸ್ಥಾನವೊಂದರಲ್ಲಿ ಜನರು ಜೀವ ಉಳಿಸಿಕೊಳ್ಳಲು ಆಶ್ರಯ ಪಡೆಯಬೇಕಾದಂತ ಪರಿಸ್ಥಿತಿ ಎದುರಾಗಿದೆ .
ಈ ಮಟ್ಟದಲ್ಲಿ ಅವಾಂತರ ಸೃಷ್ಟಿಯಾಗಲು ಕಾರಣ ಕ್ಯಾಂಪ್ ಗೆ ಹೊಂದಿಕೊಂಡಂತೆ ಬೈರಾಪುರ ಗ್ರಾಮದ ಬುಲ್ಡೇರ ಮಂಜಪ್ಪ ಎಂಬುವವರು ನಾಲ್ಕು ಎಕರೆ ಜಮೀನನ್ನು ಖರೀದಿ ಮಾಡಿದ್ದು ಅವರು ಹೊಸದಾಗಿ ಅವರ ತೋಟದ ಜಮೀನಿಗೆ ಕಾಂಪೌಂಡನ್ನು ನಿರ್ಮಿಸಿಕೊಂಡಿರುತ್ತಾರೆ ಯಥಾಪ್ರಕಾರವಾಗಿ ಕ್ಯಾಂಪ್ ನ ನೀರು ತೋಟದ ಮುಖಾಂತರ ಹಳ್ಳಕ್ಕೆ ಅರಿಯಬೇಕಾಗಿದ್ದು ನೀರು ಹರಿಯುವ ಜಾಗಕ್ಕೆ ಕಾಂಪೌಂಡ್ ನಿರ್ಮಿಸಿಕೊಂಡಿರುವುದರಿಂದ ನೀರು ಕಾಂಪೌಂಡನ್ನು ತಡೆಗೋಡೆ ಮಾಡಿಕೊಂಡು ಅಲ್ಲಿಯೇ ಸಣ್ಣಕೆರೆಯಂತೆ ಗುಂಡಿಗಳು ನಿರ್ಮಾಣವಾಗಿವೆ ಕಾಂಪೌಂಡ್ ನಿರ್ಮಾಣ ಮಾಡುವಾಗ ಕ್ಯಾಂಪ್ ನ ಜನರು ಕೈಕಾಲು ಮುಗಿದು ಅಂಗಲಾಚಿ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಬೇಡಿಕೊಂಡರೂ ಕ್ರಮ ಕೈಗೊಳ್ಳದೆ ಪಂಚಾಯಿತಿ ಅಧಿಕಾರಿಗಳು ಕಾಂಪೌಂಡ್ ಕಟ್ಟಲು ಅವರೇ ಕುಮಕ್ಕು ನೀಡಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ .
ಜನರ ಪರವಾಗಿ ಊರಿನ ಕೆಲಸ ಕಾರ್ಯಗಳನ್ನು ಮಾಡಬೇಕಾದಂತ ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಜಮೀನಿನ ಮಾಲಿಕರೊಬ್ಬರ ಪರ ನಿಂತಿರುವುದು ಜನರ ಬದುಕು ಬೀದಿಗೆ ಬರಲು ಕಾರಣವಾಗಿದೆ ಎನ್ನಲಾಗುತ್ತದೆ.
ಕಳೆದ ಒಂದು ವಾರದಿಂದ ಜನರು ತಮ್ಮ ತಮ್ಮ ಮನೆ ಮಠಗಳನ್ನು ತೊರೆದು ಕ್ಯಾಂಪ್ ನ ಹೊರಗಡೆ ದೇವಸ್ಥಾನದಲ್ಲಿ ಒಂದು ದಿನಕ್ಕೆ ಆಗೋವಷ್ಟು ವಸ್ತುಗಳನ್ನು ಹೊರಗಿನಿಂದ ತಂದು ಅಡಿಗೆಯನ್ನು ತಯಾರಿಸಿ ಅದನ್ನೆ ಊಟ ಮಾಡಿ ಕಾಲ ಕಳೆಯುವಂತಹ ಪರಿಸ್ಥಿತಿ ಎದುರಾಗಿದೆ ಎಂದು ನಿವಾಸಿಗಳು ತಮ್ಮ ಅಳಲನ್ನು ತೊಡಿಕೊಳ್ಳುತ್ತಿದ್ದಾರೆ.
ವಿಷಯ ತಿಳಿದೊಡನೆ ಎಂಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್ ನ ಅಧ್ಯಕ್ಷರಾದ ಎಂಪಿ ವೀಣಾಮಹಾಂತೇಶ್ ರವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿ ಜನರಿಗೆ ಧೈರ್ಯವನ್ನು ಹೇಳಿ , ನಿಮ್ಮ ಜೊತೆಗೆ ನಾವಿದ್ದೇವೆ ಎಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು .
ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಜಮೀನಿಗೆ ನಿರ್ಮಿಸಿಕೊಂಡಿರುವ ಕಾಂಪೌಂಡ್ ನಿಂದಾಗಿ ಗ್ರಾಮದಲ್ಲಿ ಇಂತಹ ಅವಾಂತರ ಸೃಷ್ಟಿಯಾಗಿದೆ ಕಾಂಪೌಂಡ್ ನಿರ್ಮಿಸಲು ಜನ ವಸತಿ ಪ್ರದೇಶದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅವಕಾಶ ಕೊಡಬಾರದಿತ್ತು ಜಗತ್ತಿನ ಎಂತೆಂಥ ಗೋಡೆಗಳೇ ಬಿದ್ದು ಹೋಗಿವೆ ಉದಾಹರಣೆಗೆ ಜರ್ಮನ್ ನ ಬರ್ಲಿನ್ ಗೊಡೆಯಾಗಿದೆ .
ಜಮೀನುಗಳಿಗೆ ಕಾಂಪೌಂಡನ್ನು ನಿರ್ಮಿಸುವ ಸಲುವಾಗಿ ಜನರ ಬದುುಕು ಬೀದಿಗೆ ಬಿಿಡುವಂತಾಗಿದೆ ಇದಕ್ಕೆ ನೇರ ಕಾರಣ ಅಧಿಕಾರಿಗಳ ನಿರ್ಲಕ್ಷವೇ ಆಗಿದೆ ಎಂದರು.
ಜನರ ಬದುಕು ಈ ರೀತಿಯಾಗಿ ಬೀದಿಗೆ ಬಂದರೂ ಅಧಿಕಾರಿಗಳು ಇತ್ತ ತಿರುಗಿಯೂ ನೋಡಿಲ್ಲ ಅಷ್ಟುಇಷ್ಟು ವಸ್ತುಗಳನ್ನು ಊರ ಹೊರಗಡೆ ತಂದು ಅಡುಗೆ ಮಾಡಿ ತಿಂದು ಬದುಕುತ್ತಿರುವುದು ತೀರ ನೋವಿನ ಸಂಗತಿ ಇದನ್ನು ಕಂಡರೂ ಕಾಣದ ರೀತಿಯಲ್ಲಿ ಅಧಿಕಾರಿಗಳು ವರ್ತಿಸಿ ನಿರ್ಲಕ್ಷ್ಯ ವಹಿಸಿರುವುದು ದುರಂತವಾಗಿದೆ, ಜನಪ್ರತಿನಿಧಿಗಳಿಗಂತೂ ಇದರ ಗೊಡವೆಯೂ ಬೇಡವಾಗಿದೆ ಎಂದು ಪ್ರತಿಕ್ರಿಸಿದರು.
ಇವುಗಳಿಗೆ ಪರಿಹಾರ ನೀಡಲು ನಮ್ಮಿಂದ ಆಗದಿದ್ದರೂ ಸಹ ಒಂದು ,ಎರಡು ದಿನಗಳಿಗೆ ಆಗುವಷ್ಟು ದಿನಸಿಗಳನ್ನು ತಂದು ಜನರಿಗೆ ನೀಡಿದ್ದೇನೆ ವಸ್ತ್ರಗಳು, ಬೆಡ್ ಶೀಟ್ ಗಳನ್ನು ನೀಡಿ ನನ್ನ ಕೈಲಾದ ಸಹಾಯವನ್ನು ಮಾಡಲು ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.
ಕಾಂಪೌಂಡ್ ಪಕ್ಕದಲ್ಲಿ ಕ್ಯಾಂಪಿಗೆ ಹೊಂದಿಕೊಂಡಂತೆ ನಿಂತುಕೊಂಡಿರುವ ನೀರು ಅಲ್ಲೇ ನಿಂತಿರುವುದರಿಂದ ಸೊಳ್ಳೆಗಳು ಉಂಟಾಗಿ ಚಿಕನ್ ಗುನ್ಯಾ ,ಡೆಂಗ್ಯೂ ದಂತ ಮಾರಕ ಕಾಯಿಲೆಗಳು ಜನರಿಗೆ ಬರುವ ಭೀತಿಯಲ್ಲಿಯೇ ಜನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿದ್ದಾರೆ ಜನರು ಆರೋಗ್ಯ ಸೌಲಭ್ಯಕ್ಕಾಗಿ ವಾಹನಗಳೂ ಇಲ್ಲದೆ , ವೈದ್ಯಕೀಯ ಸೌಲಭ್ಯಗಳಿಗಾಗಿ ಪಟ್ಟಣಕ್ಕೆ ಹೋಗಿ ಬರಲು ಪರದಾಡುವಂತಾಗಿದೆ .
ನಂದ್ಯಾಲ ಕ್ಯಾಂಪ್ ನಲ್ಲಿ ಮಳೆಯಿಂದಾಗಿ ಸೃಷ್ಟಿಯಾಗಿರುವ ಅವಾಂತರದ ಬಗ್ಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ನಮ್ಮ ಗಮನಕ್ಕೆ ತಂದಿರುವುದಿಲ್ಲ, ಮಾದ್ಯಮದವರಿಂದಾಗಿ ಈಗ ನಮ್ಮ ಗಮನಕ್ಕೆ ಬಂದಿದೆ ಕೂಡಲೇ ನೀರನ್ನು ಕಾಂಪೌಂಡ್ ನಿಂದ ಹೊರಗಡೆ ಹೋಗಲು ದಾರಿ ಮಾಡಿ ಗ್ರಾವಲ್ ಮಣ್ಣನ್ನು ಏರಿಸಿ ಸದ್ಯದ ಮಟ್ಟಿಗೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿರುತ್ತೇನೆ.
ಶಿವಕುಮಾರ್ ಬಿರಾದರ್ ತಹಸಿಲ್ದಾರರು ಹರಪನಹಳ್ಳಿ.
ಗ್ರಾಮದಲ್ಲಿ ನೀರು ನಿಂತು ಸೊಳ್ಳೆಗಳು ಉಂಟಾಗಿ ಆರೋಗ್ಯದ ಸಮಸ್ಯೆಗಳು ಉಲ್ಬಣಗೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂಬ ವಿಷಯವು ಮಾಧ್ಯಮದವರಿಂದ ನಮ್ಮ ಗಮನಕ್ಕೆ ಬಂದಿದೆ ನಾಳೆ ನಾನೆ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ತಪಾಸಣೆ ನಡೆಸಿ ನಮ್ಮ ಇಲಾಖೆಯ ಸ್ಥಳೀಯ ಸಿಬ್ಬಂದಿಗೆ ಕ್ರಮ ವಹಿಸಲು ತಿಳಿಸುತ್ತೇವೆ.
ಡಾ. ಸಲೀಂ ,ಜಿಲ್ಲಾ ಆರೋಗ್ಯ ಅಧಿಕಾರಿಗಳು ವಿಜಯನಗರ ಜಿಲ್ಲೆ.
ಮಳೆಯಿಂದಾಗಿ ನಮ್ಮ ಮನೆಗಳೆಲ್ಲ ಕೆರೆಯಂತಾಗಿದೆ ಇದನ್ನು ಕೇಳಲು ಯಾವ ಅಧಿಕಾರಿಯೂ ಸಹ ಇಲ್ಲಿ ಬಂದಿಲ್ಲ ಇದನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗಮನಕ್ಕೆ ತಂದರೆ, ಇನ್ನೊಂದು 10 ,15 ದಿನ ಬಿಟ್ಟು ಮಳೆ ನಿಂತ ಮೇಲೆ ಮಣ್ಣನ್ನು ಏರಿಸಲು ನೋಡೋಣ ಎಂದು ಹಾರಿಕೆ ಉತ್ತರವನ್ನು ನೀಡಿದ್ದಾರೆ ನಮ್ಮ ನೋವನ್ನು ಯಾರ ಮುಂದೆ ತೋಡಿಕೊಳ್ಳೋಣ ಕೂಡಲೇ ಜಮೀನಿಗೆ ನಿರ್ಮಿಸಿರುವ ಕಾಂಪೌಂಡನ್ನು ತೆರೆವುಗಳಿಸಿ ಜನರ ಬದುಕು ಉಳಿಯಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು .
ಮಂಜಮ್ಮ ಸ್ಥಳೀಯ ನಿವಾಸಿ.