ಹರಪನಹಳ್ಳಿ: ನನ್ನ ಸಮುದಾಯದವರೂ, ಕ್ಷೇತ್ರದ ಹಾಲಿ ಶಾಸಕರೂ ಆದ ಕರುಣಾಕರ ರೆಡ್ಡಿ ಅವರೇ , ರಾಜಕೀಯವನ್ನು ಮಾಡಿ ಆದರೆ ಕೀಳು ಮಟ್ಟದ ರಾಜಕಾರಣವನ್ನು ಮಾಡಬಾರದು ಎಂದು ಎಐಸಿಸಿ ವಕ್ತಾರರಾದ ಕವಿತಾರೆಡ್ಡಿ ಹೇಳಿದರು. ಪಟ್ಟಣದ ತರಳುಬಾಳು ಕಲ್ಯಾಣ ಮಂಟಪದಲ್ಲಿ ಬುಧುವಾರ ಸಂಜೆ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಮತ್ತು ಹರಪನಹಳ್ಳಿ ತಾಲೂಕುಗಳ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಹಾಗೂ ಪುರಸಭೆಯ ಪೌರಕಾರ್ಮಿಕರಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿಪಾಲ್ಗೊಂಡು ಮಾತನಾಡಿದರು .
ಕರುಣಾಕರ ರೆಡ್ಡಿ ಅವರು ಹಿರಿಯರೂ, ಸಹೋದರ ಸಮಾನರೂ ಆದ ಅವರು ಕಾರ್ಯಕ್ರಮಕ್ಕೆ ಹೋಗದಂತೆ ತಾಕೀತು ಮಾಡಿರುವುದು ಸರಿಯಲ್ಲ ಎಂದರು . ನಾವು ಕರೋನಾ ಸಂದಿಗ್ಧ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಜನರ ,ರೋಗಿಗಳ ಸೇವೆಯನ್ನು ಮಾಡಿದ ಕರೋನ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಈ ಕಾರ್ಯಕ್ರಮಕ್ಕೆ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಹೋಗಬಾರದೆಂದು ಕ್ಷೇತ್ರದ ಶಾಸಕರೂ, ನನ್ನ ಸಮುದಾಯದವರೂ ಆದ ಗಾಲಿ ಕರುಣಾಕರ ರೆಡ್ಡಿ ಅವರು ಹೇಳಿದ್ದಾರೆ ಆದ್ದರಿಂದ ಕರುಣಾಕರ ರೆಡ್ಡಿ ಹೆಣ್ಣು ಮಕ್ಕಳ ವಿಚಾರದಲ್ಲಿ ಈ ತರಹದ ಕೀಳುಮಟ್ಟದ ರಾಜಕಾರಣವನ್ನು ಮಾಡಲು ಇಳಿಯಬಾರದು ಎಂದು ಕವಿತಾ ರೆಡ್ಡಿ ಅವರು ಹೇಳಿದರು .
ನಿಮಗೆ (ಶಾಸಕರಿಗೆ) ನಿಜವಾಗಲೂ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತರನ್ನು ಗುರುತಿಸುವ ಶಕ್ತಿ ಏನಾದರೂ ಇದ್ದರೆ ಇಂತದ್ದನ್ನ ಬಿಟ್ಟು ಆಶಾ ಕಾರ್ಯಕರ್ತೆಯರಿಗೆ 4000 ಇರುವ ಗೌರವಧನವನ್ನು 10 ಸಾವಿರ ರೂಪಾಯಿಗೆ ಏರಿಸಲಿ ಉಚಿತ ಬಸ್ ಪಾಸ್ ಕೊಡಿಸಲಿ, ಜೊತೆಗೆ ವಿಮೆಯ (ಗ್ರ್ಯಾಚುಟಿ) ಸೌಲಭ್ಯವನ್ನು ದೊರಕಿಸಿಕೊಡಲಿ,ಪಿ ಎಫ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಿ, ಇದೊಂದು ಅಭಿನಂದನಾ ಸಮಾರಂಭ ಎಂದು ಹೇಳಿದ ಅವರು ಇಂತಹ ಕಾರ್ಯಕ್ರಮದಲ್ಲಿ ರಾಜಕಾರಣವನ್ನು ಮಾತನಾಡುವುದು ಸರಿಯಲ್ಲ ಆದಾಗ್ಯೂ ಮಾತನಾಡುತ್ತಿದ್ದೇನೆ ಎಂದು ಹೇಳಿದ ಅವರು ಆಶಾ ಕಾರ್ಯಕರ್ತರಿಗೂ ಅಂಗನವಾಡಿ ಕಾರ್ಯಕರ್ತರಿಗೂ ಸನ್ಮಾನವನ್ನು ಮಾಡುವುದರಿಂದ ನಮಗೆ ಗೌರವ ಬರುತ್ತದೆಯೇ ವಿನಹ ,ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರಿಗೆ ಗೌರವ ಬಂದಂತಲ್ಲ ಎಂದು ಅವರು ಹೇಳಿದರು.
ಸದನದಲ್ಲಿ ಬಾಯಿ ತೆಗೆದು ಮಾತನಾಡದ ಕರುಣಾಕರ ರೆಡ್ಡಿ ಅವರು ಕ್ಷೇತ್ರದಲ್ಲಿ ಇಂತಹ ಕಾರ್ಯಕ್ರಮಕ್ಕೆ ಹಾಜರಾಗದಂತೆ ಆಶಾ ಕಾರ್ಯಕರ್ತರಿಗೂ ಅಂಗನವಾಡಿ ಕಾರ್ಯಕರ್ತರಿಗೂ ನಿರ್ಬಂಧ ವಿಧಿಸಿರುವುದು ಶೋಭೆ ತರುವಂತದ್ದಲ್ಲ. ಅಂಗನವಾಡಿಯಲ್ಲಿ ಕೆಲಸ ಮಾಡಬೇಕೆಂದು ಎನಿಸಿದರೆ ಚಳಿಗಾಲದಲ್ಲಿ ಚಾಪೆ ಮೇಲೆ ಕುಳಿತುಕೊಂಡಾಗ ಮಕ್ಕಳಿಗೆ ಕುಳಿತುಕೊಳ್ಳಲು ಚಳಿ ಯಾಗುತ್ತದೆ ,ಅಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ ಎಷ್ಟೋ ಅಂಗನವಾಡಿಗಳಲ್ಲಿ ಮ್ಯಾಟ್ ಗಳು ಇರುವುದಿಲ್ಲ , ಮಾತೃಶ್ರೀ ಕಾರ್ಯಕ್ರಮಕ್ಕೆ ಊಟಕ್ಕೆ ಬರುವ ಹೆಣ್ಣುಮಕ್ಕಳಿಗೆ ಕುಳಿತುಕೊಳ್ಳಲು ಕುರ್ಚಿ ಇರುವುದಿಲ್ಲ, ಕುಡಿಯಲು ನೀರು ಇರುವುದಿಲ್ಲ ,ಶೌಚಾಲಯದ ವ್ಯವಸ್ಥೆ ಇರುವುದಿಲ್ಲ ಇವುಗಳನ್ನು ನಿಮ್ಮ ಕ್ಷೇತ್ರದಲ್ಲಿ ಮಾಡಿ ತೋರಿಸಿ ಎಂದು ಕರುಣಾಕರ ರೆಡ್ಡಿ ಗೆ ಸವಾಲು ಹಾಕಿದರು. ನೀವು ಅವರಿಗೆ ಸನ್ಮಾನ ಮಾಡಬೇಡಿ , ನೀವು ಇವರಿಗೆ ಸನ್ಮಾನ ಮಾಡಬಾರದು ,ಈ ಸಂದರ್ಭಕ್ಕೆ ಬರಬಾರದು ಎಂದು ಹೇಳುವುದು ತಪ್ಪು ಎಂದರು.
ಅವರಿಗೆ ನೀಡುವ ಗೌರವಧನದ ಬಗ್ಗೆ ಸದನದಲ್ಲಿ ಮಾತನಾಡಿ ಸಂಬಳ ಹೆಚ್ಚು ಮಾಡಿಸಲಿ ನೋಡೋಣ ಎಂದರಲ್ಲದೆ ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಯಾರದೇ ಮನೆಗೆ ಹೋದಾಗಲೂ ಇದು ಕಾಂಗ್ರೆಸ್ ಮನೆ, ಇದು ಬಿಜೆಪಿ ಮನೆ , ಇದು ಆ ಜಾತಿ ಮನೆ, ಇದು ಈ ಜಾತಿ ಮನೆ ,ಎಂದು ಆಲೋಚಿಸಿ ಕೆಲಸವನ್ನು ಮಾಡಿದ್ದಾರೆಯೇ ? ಎಂದು ಅವರು ಪ್ರಶ್ನಿಸಿದರು , ಆದ್ದರಿಂದ ಅವರ ಸೇವೆಯನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು .