Vijayanagara Express

Kannada News Portal

ಮಳೆಗಾಳಿಗೆ ಟೋಲ್‌ಗೇಟ್ ಪಲ್ಟಿ ಪ್ರಾಣಾಪಾಯದಿಂದ ಪಾರಾದ ಸಿಬ್ಬಂದಿ , ಹಿಡಿಶಾಪ ಹಾಕಿದ ಪ್ರಯಾಣಿಕರು

1 min read

ಮಳೆಗಾಳಿಗೆ ಟೋಲ್‌ಗೇಟ್ ಪಲ್ಟಿ ಪ್ರಾಣಾಪಾಯದಿಂದ ಪಾರಾದ ಸಿಬ್ಬಂದಿ , ಹಿಡಿಶಾಪ ಹಾಕಿದ ಪ್ರಯಾಣಿಕರು

ಹರಪನಹಳ್ಳಿ: ಬಿರುಗಾಳಿ ಸಹಿತ ಸುರಿದ ಮಳೆಯ ರಭಸಕ್ಕೆ ಹರಪನಹಳ್ಳಿ ಪಟ್ಟಣದ ಹೊರವಲಯದ ಹೂವಿನಹಡಗಲಿ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ರಾಜ್ಯ ಹೆದ್ದಾರಿ ಹರಪನಹಳ್ಳಿ-ಮುಂಡರಗಿ ಟೋಲ್‌ಗೇಟ್ ನೆಲಕ್ಕುರುಳಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಮಂಗಳವಾರ ಸಂಜೆ ಇದ್ದಕ್ಕಿದ್ದಂತೆಯೇ ಜೋರಾಗಿ ಗಾಳಿ ಬಿಸಿದ ಪರಿಣಾಮ ಹೂವಿನಹಡಗಲಿ ಕಡೆಯಿಂದ ಹರಪನಹಳ್ಳಿ ಭಾಗಕ್ಕೆ ಟೋಲ್‌ಗೇಟ್‌ನ ಮೇಲ್ಛಾವಣೆ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಇಲ್ಲಿ ಸುಮಾರು 8 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಮೇಲ್ಛಾವಣೆ ಗಾಳಿಗೆ ಮುಂದಕ್ಕೆ ಹಾರಿ ಹೋದ ಪರಿಣಾಮ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪರಾಗಿದ್ದಾರೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಟೋಲ್‌ಗೇಟ್‌ನ ಮೇಲ್ಛಾವಣೆ ರಸ್ತೆಗೆ ಬಿದ್ದಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.

 


ಘಟನಾ ಸ್ಥಳಕ್ಕೆ ಹರಪನಹಳ್ಳಿ ಠಾಣೆ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಿಲೀಪ್ ಬಿಲ್ಡ್ಂಕಾನ್ ಕಂಪನಿ ಸಿಬ್ಬಂದಿ ಹಾಗೂ ಉಪ ಗುತ್ತಿಗೆ ಪಡೆದಿರುವ ಮದರಸಾಬ್ ಖಾದರ್‌ಸಾಬ್ ಸಿಂಗನಮಳ್ಳಿ ಸ್ಥಳದಲ್ಲಿದ್ದಾರೆ.

ಕಳಪೆ ಕಾಮಗಾರಿಗೆ ಪ್ರತಿಫಲವೇ ಈ ಘಟನೆ ?
ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮ ನಿಯಮಿತದಿಂದ ದಿಲೀಪ್ ಬಿಲ್ಡ್ಂಕಾನ್ ಕಂಪನಿ 2017-18ರಲ್ಲಿ ಹರಪನಹಳ್ಳಿ-ಮುಂಡರಗಿ ಟೋಲ್‌ಗೇಟ್ ನಿರ್ಮಾಣ ಮಾಡಿದ್ದಾರೆ. ಗುತ್ತಿಗೆದಾರ ಕೆ.ವಿ.ಹಂಚಿನಾಳ್ ಎಂಬುವವರು ಟೋಲ್ ಸಂಗ್ರಹ ಗುತ್ತಿಗೆ ಪಡೆದುಕೊಂಡಿದ್ದಾರೆ. ಆದರೆ ಇವರು ಮುಂಡರಗಿಯ ಕೋರಲಹಳ್ಳಿ ಗ್ರಾಮದ ಮದರಸಾಬ್ ಖಾದರ್‌ಸಾಬ್ ಸಿಂಗನಮಳ್ಳಿ ಎನ್ನುವವರಿಗೆ ಉಪ ಗುತ್ತಿಗೆ ನೀಡಿದ್ದಾರೆ. ಸದ್ಯ ಇದೇ ಮದರಸಾಬ್ ಖಾದರ್‌ಸಾಬ್ ಸಿಂಗನಮಳ್ಳಿ ಎನ್ನುವವರು ಡಿಸೆಂಬರ್ 13, 2019ರಿಂದ ವಾಹನಗಳಿಂದ ಟೋಲ್ ಹಣ ಸಂಗ್ರಹ ಮಾಡುಲು ಆರಂಭಿಸಿದ್ದಾರೆ.

ಕಳಪೆ ಕಾಮಗಾರಿ ಪರಿಣಾಮ ಟೋಲ್‌ಗೇಟ್ ಮೇಲ್ಛಾವಣೆ ಕೇವಲ 3 ವರ್ಷ ಕಳೆಯುವುವಷ್ಟರಲ್ಲಿಯೇ ನೆಲಕ್ಕುರುಳಿದೆ. ಆದರೆ ಇಲ್ಲಿ ಯಾವುದೇ ತರಹದ ಮೂಲಭೂತ ಸೌಕರ್ಯ ಒದಗಿಸದೇ ವಾಹನ ಸವಾರರಿಂದ ನಿಯಮಬಾಹಿರವಾಗಿ ಟೋಲ್ ಹಣವನ್ನು ಸಂಗ್ರಹಿಸಲಾಗುತ್ತಿದೆ. ಪುರುಷ ಮತ್ತು ಮಹಿಳಾ ಶೌಚಾಲಯವಿಲ್ಲ, ಸೇವಾ(ಸರ್ವೀಸ್) ರಸ್ತೆ ಇಲ್ಲ. ಆದರೂ ವಾಹನಗಳಿಂದ ಟೋಲ್ ಹಣವನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ.
ಮೂಲಭೂತ ಸೌಕರ್ಯಗಳ ಬಗ್ಗೆ ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮ ನಿಯಮಿತದ ಅಧಿಕಾರಿಗಳನ್ನು ಪ್ರಶ್ನಿಸಿದರೆ ಜಮೀನು ವಿವಾದ ಕೋರ್ಟ್‌ನಲ್ಲಿದೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಮತ್ತೆ ವಾಹನಗಳಿಂದ ಏಕೆ ಹಣವನ್ನು ಸಂಗ್ರಹಿಸುತ್ತಿದ್ದೀರಿ? ಎಂದು ಅಧಿಕಾರಿಗಳನ್ನು ಮರು ಪ್ರಶ್ನಿಸಿದರೆ ರೈತರ ಜಮೀನಿನ ವಿವಾದ ಬಗೆ ಹರಿದ ನಂತರವೇ ಸರಿಪಡಿಸುತ್ತೇವೆ ಎನ್ನುವ ಉತ್ತರ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಯಾವುದೇ ಮೂಲ ಸೌಕರ್ಯ ನೀಡದೇ ರಸ್ತೆ ಅಭಿವೃದ್ದಿ ಹೆಸರಿನಲ್ಲಿ ವಾಹನ ಸವಾರರಿಂದ ಹಣ ವಸೂಲಿ ನಡೆಯುತ್ತಿರುವುದಂತೂ ಸತ್ಯವಾದ ಮಾತಾಗಿದೆ .


ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವುದಲ್ಲದೇ ಕಳಪೆ ಕಾಮಗಾರಿ ಮೂಲಕ ಜನರ ಜೀವ ತೆಗೆಯಲು ಅಧಿಕಾರಿಗಳು ಕಾಯುತ್ತಿದ್ದಾರೋ ಎಂದು ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿರುವುದು ಕಂಡು ಬಂತು.

Leave a Reply

Your email address will not be published. Required fields are marked *